ಜೈಪುರ: ಭಾರತದ ಮೊದಲ ಸ್ವದೇಶಿ ವಿನ್ಯಾಸದ, ವಾಹನದ ಮೇಲೆ ಅಳವಡಿಸಬಹುದಾದ ಎರಡು ಹಂತದ ಡ್ರೋನ್ ಬೇಟೆಗಾರ ವ್ಯವಸ್ಥೆ ‘ಭಾರ್ಗವಾಸ್ತ್ರ’ (Bhargavastra) ತನ್ನ ಅಭಿವೃದ್ಧಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶತ್ರುಗಳ ಡ್ರೋನ್ ದಾಳಿಯನ್ನು ತಡೆಯುವ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ಈ ವಾಯು ರಕ್ಷಣಾ ವ್ಯವಸ್ಥೆಯು ಒಂದೇ ಸಮಯದಲ್ಲಿ ಗುಂಪು ಗುಂಪಾಗಿ ಬರುವ ಡ್ರೋನ್ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ನವೆಂಬರ್ 26ರಂದು ಈ ಸ್ವದೇಶಿ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಭಾರ್ಗವಾಸ್ತ್ರ ವ್ಯವಸ್ಥೆಯ ಆಂತರಿಕ ಅಭಿವೃದ್ಧಿ ಪರೀಕ್ಷೆಗಳನ್ನು ನವೆಂಬರ್ 20ರಿಂದ 24ರವರೆಗೆ ನಡೆಸಲಾಗಿತ್ತು. ಪರೀಕ್ಷೆಗಳ ಮೂಲಕ ವ್ಯವಸ್ಥೆಯ ಕಾರ್ಯಕ್ಷಮತೆ ಹಾಗೂ ಡ್ರೋನ್ಗಳನ್ನು ಎದುರಿಸುವ ಸಾಮರ್ಥ್ಯವನ್ನು ಪರಿಶೀಲಿಸಲಾಗಿದೆ.
ಭಾರ್ಗವಾಸ್ತ್ರವನ್ನು ಎರಡು ಆವೃತ್ತಿಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿಯಲ್ಲಿ ವಾಯು ರಕ್ಷಣಾ ರಾಕೆಟ್ಗಳನ್ನು ಬಳಸಲಾಗುತ್ತದೆ. ಎರಡನೇ ಆವೃತ್ತಿಯು ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸಲು ಸ್ವಯಂಚಾಲಿತ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ. ಇದರ ಪತ್ತೆ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ರೇಡಿಯೋ ಫ್ರೀಕ್ವೆನ್ಸಿ ಡಿಟೆಕ್ಟರ್ಗಳು ಹಾಗೂ ರಾಡಾರ್ಗಳನ್ನು ಅಳವಡಿಸಲಾಗಿದೆ.
ಈ ವ್ಯವಸ್ಥೆಯಲ್ಲಿ ವಾಯು ರಕ್ಷಣಾ ರಾಕೆಟ್ಗಳ ಜೊತೆಗೆ ಗುರಿಯನ್ನು ನಿಖರವಾಗಿ ತಲುಪುವ ಮಾರ್ಗದರ್ಶಿತ ಸೂಕ್ಷ್ಮ ಕ್ಷಿಪಣಿಗಳನ್ನೂ ಬಳಸಲಾಗುತ್ತದೆ. ರಾಡಾರ್, ವಿವಿಧ ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ನಿಯಂತ್ರಣ ವ್ಯವಸ್ಥೆಯ ನೆರವಿನಿಂದ ಶತ್ರುಗಳ ಡ್ರೋನ್ಗಳನ್ನು ಪತ್ತೆಹಚ್ಚಿ ಅವುಗಳ ಚಲನವಲನದ ಮೇಲೆ ನಿಗಾ ಇರಿಸಲಿದೆ.
ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ ಈ ಸ್ವದೇಶಿ ಡ್ರೋನ್ ಬೇಟೆಗಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. 2027ರ ಮಾರ್ಚ್ ವೇಳೆಗೆ ಭಾರ್ಗವಾಸ್ತ್ರವನ್ನು ಭಾರತೀಯ ಸೇನೆಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ವ್ಯವಸ್ಥೆ ಸೇನೆಯ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಡ್ರೋನ್ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತದ ರಕ್ಷಣಾ ಬತ್ತಳಿಕೆಗೆ ಮತ್ತೊಂದು ಸ್ವದೇಶಿ ಅಸ್ತ್ರ ಸೇರ್ಪಡೆಯಾಗಲಿದೆ.









