ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ಸಂಸ್ಥೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.
ಅಧ್ಯಕ್ಷೆ- ಮಂಜುಳಾ ಅಕ್ಕಿ
ಲಕ್ಷ್ಮೇಶ್ವರ ಮೂಲದ ಶ್ರೀಮತಿ ಮಂಜುಳಾ ಎಫ್. ಅಕ್ಕಿ ಅವರು ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಿ.ಎ., ಬಿ.ಎಡ್. ಹಾಗೂ ಎಂ.ಎ. ಪದವೀಧರರಾಗಿರುವ ಅವರು 2014ರಿಂದ ಇನ್ನರ್‌ವೀಲ್ ಕ್ಲಬ್‌ನ ಸಕ್ರಿಯ ಸದಸ್ಯೆಯಾಗಿದ್ದು, ಐಎಸ್‌ಒ, ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷೆ ಸೇರಿದಂತೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಕಾರ್ಯದರ್ಶಿ – ಪೂಜಾ ಭೂಮಾ
ಶ್ರೀಮತಿ ಪೂಜಾ ಕಿರಣ್ ಭೂಮಾ ಅವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಬಿ.ಕಾಂ. ಹಾಗೂ ಎಂ.ಕಾಂ. ಪದವೀಧರರಾಗಿರುವ ಅವರು ಗದುಗಿನ ಉದ್ಯಮಿಗಳಾದ ಕಿರಣ್ ಭೂಮಾ ಅವರ ಧರ್ಮಪತ್ನಿಯಾಗಿದ್ದು, ಶುಭಂ ಜುವೆಲರ್ಸ್ ಸಂಸ್ಥೆಯ ಪ್ರೊಪ್ರೈಟರ್ ಆಗಿದ್ದಾರೆ. ಕ್ಲಬ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು ಓದು ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ಖಜಾಂಚಿ – ವೀಣಾ ಕಾವೇರಿ
ಶ್ರೀಮತಿ ವೀಣಾ ಕಾವೇರಿ ಅವರು ಖಜಾಂಚಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎಂ.ಎಸ್‌ಸಿ., ಬಿ.ಎಡ್. ಪದವೀಧರರಾಗಿರುವ ಅವರು ಶಿಕ್ಷಕಿಯಾಗಿ ಹಾಗೂ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕ್ಲಬ್‌ನ ಸಕ್ರಿಯ ಸದಸ್ಯೆಯಾಗಿದ್ದು, ಕಳೆದ ಸಾಲಿನಲ್ಲಿ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದರು.
ಐಎಸ್‌ಒ – ವಿದ್ಯಾ ಶಿವನಗುತ್ತಿ
ಶ್ರೀಮತಿ ವಿದ್ಯಾ ಶಿವನಗುತ್ತಿ ಅವರು ಐಎಸ್‌ಒ ಆಗಿ ಸೇವೆ ಸಲ್ಲಿಸಲಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ್ದ ಅವರು ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. “ಅಕ್ಕನ ಬಳಗ”ದ ಸಕ್ರಿಯ ಸದಸ್ಯೆಯಾಗಿರುವ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂಪಾದಕಿ – ಮೀನಾಕ್ಷಿ ಕೊರವನವರ
ಶ್ರೀಮತಿ ಮೀನಾಕ್ಷಿ ಕೊರವನವರ ಅವರು ಸಂಸ್ಥೆಯ ಸಂಪಾದಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿರುವ ಅವರು ಇನ್ನರ್‌ವೀಲ್ ಕ್ಲಬ್ ಹಾಗೂ ಕದಳಿ ವೇದಿಕೆಯ ಸಕ್ರಿಯ ಸದಸ್ಯೆಯಾಗಿದ್ದು, ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತೋಟಗಾರಿಕೆ ಮತ್ತು ಚಿತ್ರಕಲೆ ಅವರ ಹವ್ಯಾಸಗಳಾಗಿವೆ.
ನೂತನ ಪದಾಧಿಕಾರಿಗಳ ತಂಡದ ನೇತೃತ್ವದಲ್ಲಿ ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿ ಮತ್ತಷ್ಟು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.



