ವಿಜಯಸಾಕ್ಷಿ ಸುದ್ದಿ, ಡಂಬಳ : ಜಿಲ್ಲೆಯಲ್ಲಿ ಮಳೆಯಿಂದಾಗಿ ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆಗಳು ಹೆಚ್ಚು ಹಾನಿಯಾಗಿವೆ. ಇತರೆ ಬೆಳೆ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿದೆ. ಶೀಘ್ರದಲ್ಲಿ ರೈತರ ಖಾತೆಗೆ 2 ಹೆಕ್ಟೆರ್‌ವರೆಗೆ ನೇರವಾಗಿ ಬೆಳೆಹಾನಿ ಪರಿಹಾರ ನೀಡಲಾಗುವುದು. ಸರ್ಕಾರದಿಂದ ಈಗಾಗಲೇ ಹಣ ಬಂದಿದ್ದು, ಜಿಲ್ಲಾಡಳಿತ ಸದಾ ಕಾಲ ರೈತರೊಂದಿಗೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭರವಸೆ ನೀಡಿದರು.
ಡಂಬಳ ಹೋಬಳಿಯ ಕದಾಂಪೂರ, ಪೇಠಾ ಆಲೂರ, ಯಕ್ಲಾಸಪೂರ ಭೇಟಿ ಮತ್ತು ಡಂಬಳ ಗ್ರಾಮದ ರೈತ ಮಹಿಳೆ ಶಾಂತವ್ವ ಬಿಸನಹಳ್ಳಿ ಅವರ ಜಮೀನಿನಲ್ಲಿ ನಿರಂತವಾಗಿ ಮಳೆ ಪರಿಣಾಮ ಹಾನಿಯಾದ ಈರುಳ್ಳಿ ಬೆಳೆಯನ್ನು ಬುಧವಾರ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಗೋಣಿಬಸಪ್ಪ ಎಸ್.ಕೊರ್ಲಹಳ್ಳಿ, ತಹಸೀಲ್ದಾರ ಪಿ.ಎಸ್. ಎರಿಸ್ವಾಮಿ, ತೋಟಗಾರಿಕೆ ಉಪ ನಿರ್ದೇಶಕ ಶಶಿಕಾಂತ ಕೋಟೆಮನಿ, ಜಿಲ್ಲಾ ಉಪಕೃಷಿ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಎಂ. ತಾಂಬೋಟಿ, ಸಹಾಯಕ ತೋಟಗಾರಿಕೆ ಅಧಿಕಾರಿ ನಿಂಗಪ್ಪ ಕುಂಬಾರ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಡಂಬಳ ಗ್ರಾಮದ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಸ್.ವಿ. ರಾಮೇನಹಳ್ಳಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಗುಡಸಲಮನಿ, ರೈತರಾದ ಅನಿಲ ಪಲ್ಲೇದ, ಈರಣ್ಣ ನಂಜಪ್ಪನವರ ಇದ್ದರು.
ರೈತರ ಜಮೀನುಗಳಿಗೆ ಭೇಟಿ ನೀಡಿದರೆ ಮಾತ್ರ ನಮಗೆ ನಿಖರ ಮಾಹಿತಿ ತಿಳಿಯುತ್ತದೆ. ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ಮಾಡಿ 3-4 ದಿನಗಳಲ್ಲಿ ವರದಿ ಸಲ್ಲಿಸುತ್ತಾರೆ. ಶೇ.33ರಷ್ಟು ಬೆಳೆಹಾನಿಯಾಗಿದ್ದರೂ ಅದು ಸಂಪೂರ್ಣವಾಗಿ ಬೆಳೆಹಾನಿಯಾದಂತೆ. ಒಂದು ಹೆಕ್ಟೆರ್‌ಗೆ 8200 ರೂ ಪರಿಹಾರ ನೀಡಲಾಗುತ್ತದೆ. ಒಬ್ಬ ರೈತ ಎರಡು ಹೆಕ್ಟೆರ್‌ಗೆ ಮಾತ್ರ ಪರಿಹಾರ ಪಡೆಯಲು ಅರ್ಹತೆಯನ್ನು ಹೊಂದಿದ್ದಾರೆ. ಸಿಬ್ಬಂದಿಗಳು ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ಆಧಾರ್ ಕಾರ್ಡ್, ಎಫ್‌ಐಡಿ ನಂಬರ್ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.