ಬೀದರ್: ರಾಜಕೀಯ ನಾಯಕರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಅಭಿಮಾನಿಗಳು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಬೀದರ್ ಜಿಲ್ಲೆಯ ದಂಪತಿಯೊಬ್ಬರು ತಮ್ಮ ನವಜಾತ ಶಿಶುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ಹಾಗೂ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಅನ್ನಭಾಗ್ಯ ಯೋಜನೆಯಿಂದ ಪ್ರೇರಿತರಾಗಿ ಈ ವಿಭಿನ್ನ ಹೆಸರನ್ನು ಇಟ್ಟಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಗುಲಗುಂಡಿ ಗ್ರಾಮದ ರಾಜಪ್ಪ ಮತ್ತು ಅಂಬಿಕಾ ದಂಪತಿ ತಮ್ಮ 15 ದಿನಗಳ ಗಂಡು ಮಗುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯ ಹೆಸರಿನ ‘ಅನ್ನ’ ಹಾಗೂ ಸಿದ್ದರಾಮಯ್ಯ ಅವರ ಹೆಸರಿನ ‘ರಾಮಯ್ಯ’ ಪದಗಳನ್ನು ಸೇರಿಸಿ ಮಗುವಿಗೆ ಈ ಹೆಸರು ಇಡಲಾಗಿದೆ.
ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಅನ್ನಭಾಗ್ಯ ಯೋಜನೆಯು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಿಂದ ಪ್ರಭಾವಿತರಾದ ರಾಜಪ್ಪ ಮತ್ತು ಅಂಬಿಕಾ ದಂಪತಿ, ತಮ್ಮ ನೆಚ್ಚಿನ ರಾಜಕೀಯ ನಾಯಕನ ಮೇಲಿನ ಅಭಿಮಾನವನ್ನು ಮಗುವಿನ ಹೆಸರಿನ ಮೂಲಕ ವ್ಯಕ್ತಪಡಿಸಲು ನಿರ್ಧರಿಸಿದ್ದರು.
ವಿಶೇಷವೆಂದರೆ, ಮಗು ಜನಿಸುವ ಮೊದಲೇ ದಂಪತಿ ಹೆಸರನ್ನು ನಿರ್ಧರಿಸಿದ್ದರು. ಗಂಡು ಮಗುವಾದರೆ ‘ಅನ್ನರಾಮಯ್ಯ’ ಹಾಗೂ ಹೆಣ್ಣು ಮಗುವಾದರೆ ‘ಪಾರ್ವತಿರಾಮಯ್ಯ’ ಎಂದು ನಾಮಕರಣ ಮಾಡಲು ತೀರ್ಮಾನಿಸಿದ್ದರು. ಅದರಂತೆ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ತಮ್ಮ ಮೊದಲಿನ ನಿರ್ಧಾರದಂತೆ ‘ಅನ್ನರಾಮಯ್ಯ’ ಎಂದು ಹೆಸರಿಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ಹಾಗೂ ಅನ್ನಭಾಗ್ಯ ಯೋಜನೆಯ ಬಗ್ಗೆ ಹೊಂದಿರುವ ಗೌರವವೇ ಈ ನಾಮಕರಣಕ್ಕೆ ಕಾರಣ ಎಂದು ದಂಪತಿ ತಿಳಿಸಿದ್ದಾರೆ. ರಾಜಕೀಯ ನಾಯಕನೊಬ್ಬರ ಹೆಸರನ್ನು ಮಗುವಿಗೆ ಇಡುವ ಮೂಲಕ ತಮ್ಮ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.



