ಉಳ್ಳವರ ಪಾಲಾಗುತ್ತಿದೆಯಾ ರೈತರ ಭೂಮಿ?

0
Installation of huge wind fans on Singatalur Irrigation Project land itself
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಯಲು ಸೀಮೆ ಗದಗ ಜಿಲ್ಲೆಯಲ್ಲಿ ಯಾವಾಗಲೂ ಬರಗಾಲದ ಛಾಯೆ ಆವರಿಸಿರುತ್ತದೆ. ಬೇಸಿಗೆಯ ದಿನಗಳಲ್ಲಂತೂ ಹನಿ ನೀರಿಗೂ ಹಾಹಾಕಾರವೇಳುತ್ತದೆ. ಇನ್ನು, ಅನ್ನದಾತರ ಪಾಡಂತೂ ಹೇಳತೀರದು. ಹಾಗೂ ಹೀಗೂ ಬೆಳೆ ಕೈಗೆ ಬಂತೆನ್ನುವಷ್ಟರಲ್ಲಿ ಬರಗಾಲ ಬರೆ ಎಳೆಯುತ್ತದೆ. ಈ ಭಾಗದ ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿರುವ ಆಸೆಯೊಂದೇ, ಜಮೀನಿಗೆ ಒಂದಿಷ್ಟು ನೀರಾವರಿ ವ್ಯವಸ್ಥೆಯಿದ್ದರೆ…

Installation of huge wind fans on Singatalur Irrigation Project land itself

ಈ ಭಾಗದ ಅನ್ನದಾತರ ಹೋರಾಟದ ಫಲವಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಗದಗ ಜಿಲ್ಲೆಯ ಗದಗ ಹಾಗೂ ಮುಂಡರಗಿ ತಾಲೂಕುಗಳಲ್ಲಿ ಸಿಂಗಟಾಲೂರು ಏತ ನೀರಾವರಿ ಪ್ರದೇಶದಿಂದ ಹನಿ ನೀರಾವರಿ ಪೈಪ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ರೈತರ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದೆ ಅಂದುಕೊಳ್ಳುವಷ್ಟರಲ್ಲೇ ವಿಘ್ನಗಳೂ ಎದುರಾಗಿವೆ. ಪೈಪ್ ಅಳವಡಿಕೆಯಾಗುತ್ತಿರುವ ಜಮೀನುಗಳಲ್ಲಿಯೇ ಈಗ ವಿಂಡ್ ಫ್ಯಾನ್ ಅಳವಡಿಕೆ ಮಾಡಲಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪ್ರದೇಶಗಳಲ್ಲಿ ಈಗಾಗಲೇ ಸಾವಿರಾರು ವಿಂಡ್ ಫ್ಯಾನ್‌ಗಳ ಅಳವಡಿಕೆಯಾಗಿದೆ. ಆದರೆ, ಸಿಂಗಟಾಲೂರು ಏತ ನೀರಾವರಿ ಪ್ರದೇಶದಲ್ಲಿ ನೀರಾವರಿ ಯೋಜನೆಗಳಿಗೆ ಮಾತ್ರ ಅವಕಾಶವಿದೆ. ಹೊರತಾಗಿ, ಕೃಷಿಯೇತರ ಚಟುವಟಿಕೆಗೆ ಅವಕಾಶವಿಲ್ಲ. ಹೀಗಿದ್ದರೂ ಕೂಡ ವಿಂಡ್ ಫ್ಯಾನ್ ಕಂಪನಿಗಳ ಮಾಲೀಕರು ತಮ್ಮ ಪ್ರಭಾವವನ್ನು ಉಪಯೋಗಿಸಿ, ಗಾಳಿ ವಿದ್ಯುತ್ ಯಂತ್ರಗಳನ್ನು ಅಳವಡಿಸುತ್ತಿದ್ದಾರೆ ಎಂಬ ಆರೋಪ, ಆಕ್ರೋಶಗಳು ಕೇಳಿಬರತೊಡಗಿವೆ.

Installation of huge wind fans on Singatalur Irrigation Project land itself

ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಹನಿ ನೀರಾವರಿ ಯೋಜನೆ ಜಾರಿ ಮಾಡಿದೆ. ಆದರೆ, ನೀರಾವರಿ ಪ್ರದೇಶದಲ್ಲಿಯೇ ವಿಂಡ್ ಫಾನ್ ಅಳವಡಿಕೆ ಮಾಡುವುದರಿಂದ ಸದರಿ ನೀರಾವರಿ ಪ್ರದೇಶ ವಿಂಡ್ ಫ್ಯಾನ್ ಮಾಲೀಕರ ವಶಕ್ಕೆ ಹೋಗುತ್ತದೆ. ಸರ್ಕಾರದ ಯೋಜನೆ ಕೂಡಾ ಹಳ್ಳ ಹಿಯುತ್ತದೆ. ಕೂಡಲೇ ನೀರಾವರಿ ಅಚ್ಚುಕಟ್ಟು ಪ್ರದೇಶದ ವಿಂಡ್ ಫ್ಯಾನ್ ಅನುಮೋದನೆಗಳನ್ನು ತೆಗೆದುಹಾಕಿ, ಈಗಾಗಲೇ ಅಳವಡಿಸಿರುವ ವಿಂಡ್ ಫ್ಯಾನ್‌ಗಳನ್ನೂ ತೆರವುಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯ ಮಾಡುತ್ತಿದ್ದಾರೆ.

ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ರೈತರು ನೀರಾವರಿ ಮಾಡಿಕೊಂಡು ಸದೃಢವಾಗಲಿ ಎನ್ನುವ ಉದ್ದೇಶ ಸರಕಾರದ್ದಾಗಿದೆ. ಆದರೆ, ಕಳೆದ 32 ವರ್ಷಗಳಿಂದ ಈ ಯೋಜನೆ ಪೂರ್ತಿಯಾಗಿಲ್ಲ. ರೈತರ ಜಮೀನಿಗೆ ಹನಿ ನೀರೂ ಬಂದಿಲ್ಲ. ಈಗ ಅಚ್ಚುಕಟ್ಟು ಪ್ರದೇಶದ ರೈತರಿಗೆ ಆಮಿಷವೊಡ್ಡಿ ರೈತರಿಂದ ವಿಂಡ್ ಫ್ಯಾನ್ ಅಳವಡಿಕೆಗೆ ಜಮೀನುಗಳನ್ನು ಖರೀದಿ ಮಾಡುತ್ತಿದ್ದಾರೆ.

Installation of huge wind fans on Singatalur Irrigation Project land itself

ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆ ಮಾಡಲು ಅವಕಾಶವಿಲ್ಲದಿದ್ದರೂ ಅಧಿಕಾರಿಗಳು ಪರವಾನಗಿ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಇಸ್ರೇಲ್ ಮಾದರಿಯ ಹನಿ ನೀರಾವರಿ ಯೋಜನೆ ಜಾರಿ ಮಾಡಿದೆ. ನೀರಾವರಿ ಜಮೀನಿನಲ್ಲಿ ವಿಂಡ್ ಫ್ಯಾನ್‌ಗಳು ತಲೆ ಎತ್ತುತ್ತಿವೆ. ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಮಣ್ಣು ಪಾಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚೆತ್ತು ನೀರಾವರಿ ಪ್ರದೇಶದಲ್ಲಿ ವಿಂಡ್ ಫ್ಯಾನ್ ತೆರವುಗೊಳಿಸಬೇಕಿದೆ.
– ವೈ.ಎನ್. ಗೌಡರ್.
ಅಧ್ಯಕ್ಷರು, ಮುಂಡರಗಿ ಅಭಿವೃದ್ಧಿ ಹೋರಾಟ ವೇದಿಕೆ.

 


Spread the love

LEAVE A REPLY

Please enter your comment!
Please enter your name here