ವೈರಲ್ ವಿಡಿಯೋಗಳಿಂದೇನು ಲಾಭ?

0
That video claimed a life
Spread the love

ಕಳೆದ ತಿಂಗಳು ಚೆನ್ನೈನ ಹೊರವಲಯದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ಘಟನೆ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಭಾರೀ ಸದ್ದು ಮಾಡಿತ್ತು, ಟ್ರೋಲ್ ಆಗಿತ್ತು ಕೂಡ. ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ 33 ವರ್ಷದ ಟೆಕ್ಕಿಯೊಬ್ಬರ ಮನೆಯಿದೆ. ಪತಿಯೊಂದಿಗೆ ಅಲ್ಲಿ ವಾಸಿಸುತ್ತಿದ್ದ ಟೆಕ್ಕಿ, ಪತಿ ಹೊರಗೆಲ್ಲೋ ಹೋಗಿದ್ದ ಸಮಯದಲ್ಲಿ ಮನೆಯ ಬಾಲ್ಕನಿಯಲ್ಲಿ ನಿಂತು ತನ್ನ ಮಗುವಿನ ಆರೈಕೆ ಮಾಡುತ್ತಿದ್ದರು.

ಅದೇನು ಸಮಯ ಕೆಟ್ಟಿತ್ತೋ ಗೊತ್ತಿಲ್ಲ, ಕೈಲಿದ್ದ ಮಗು, ತಾಯಿಯ ಕೈಯಿಂದ ಆಯ ತಪ್ಪಿ ಎರಡನೇ ಮಹಡಿಗೆ ನೆರಳಿಗೆಂದು ಹಾಕಿದ್ದ ತಗಡಿನ ಹೊದಿಕೆಯ ಮೇಲೆ ಬಿದ್ದಿದೆ. ಮುಂದೇನು? ದಿಕ್ಕು ತೋಚದ ತಾಯಿ ಕಿರುಚಿಕೊಂಡಿದ್ದಾಳೆ. ಅಪಾರ್ಟ್ಮೆಂಟ್‌ನ ಅಕ್ಕಪಕ್ಕದ ನಿವಾಸಿಗಳು ದೌಡಾಯಿಸಿ ನೋಡಿದರೆ, ಮಗು ತಗಡಿನ ಹೊದಿಕೆಯ ಮೇಲೆ ನಿಧಾನವಾಗಿ ಜಾರುತ್ತ ಕೆಳಕ್ಕೆ ಸಾಗುತ್ತಿದೆ. ಕೆಳಗೆ ಇನ್ನೂ 2 ಅಂತಸ್ತು ಕಳೆದರೆ ನೆಲವೇ ಗತಿ. ತಡಮಾಡದ ಕೆಲ ಧೈರ್ಯಶಾಲಿಗಳು ಏನೇನೋ ಕಸರತ್ತು ನಡೆಸಿ ಮಗುವನ್ನು ಸುರಕ್ಷಿತವಾಗಿ ಬಚಾವ್ ಮಾಡಿ ತಾಯಿಯ ಮಡಿಲಿಗಿಟ್ಟರು.

ಪ್ರಕರಣವೇನೋ ಸುಖಾಂತ್ಯವಾಯಿತು ನಿಜ. ಆದರೆ, ಮುಂದಿನ ಪರಿಣಾಮ ಮಾತ್ರ ಕೆಟ್ಟದಾಗಿಯೇ ಇತ್ತು ಎಂಬುದು ಒಂದು ತಿಂಗಳು ಕಳೆದ ಮೇಲೆ, ಮೊನ್ನೆಯಷ್ಟೇ ಗೊತ್ತಾಗಿದೆ. ಅಂದು ನಡೆದ ಘಟನೆಯನ್ನು ಅದೇ ಅಪಾರ್ಟ್ಮೆಂಟ್‌ನ ನಿವಾಸಿಗಳ್ಯಾರೋ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸೋಸಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಮಗುವನ್ನು ಸುರಕ್ಷಿತವಾಗಿಸಿದ ಅಪಾರ್ಟ್ಮೆಂಟ್ ನಿವಾಸಿಗಳ ಬಗ್ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭೇಷ್ ಎಂದರು, ಬೆನ್ನು ತಟ್ಟಿದರು, ದೇವರು ದೊಡ್ಡವ ಮಗು ಉಳೀತಲ್ಲ ಎಂದರು.

ಕೆಲಸ-ಕಾರ್ಯವಿಲ್ಲದ ನಮ್ಮ ಸೋಶಿಯಲ್ ಮೀಡಿಯಾ ವೀರರು ಒಂದೆರಡು ದಿನ ಕಳೆಯುವುದರೊಳಗೆ ಆ ವಿಡಿಯೋವನ್ನು ಎಷ್ಟು ಸಾಧ್ಯವೋ ಅಷ್ಟು ಹಂಚಿ ಹರಿದು ವೈರಲ್ ವಿಡಿಯೋ ಎಂಬ ಹಣೆಪಟ್ಟಿ ಕಟ್ಟಿದರು.

ಎಲ್ಲೆಲ್ಲೋ ಸುತ್ತಾಡಿ ಬಂದ ಆ ವಿಡಿಯೋವನ್ನು ಈ ತಾಯಿಯೂ ನೋಡಿ ಆಘಾತಕ್ಕೊಳಗಾಗಿದ್ದಾಳೆ. ಅಂದು ಹೀಗೆಲ್ಲಾ ಆಯ್ತಾ ಎಂದಲ್ಲ, ಆ ವಿಡಿಯೋಗೆ ನಮ್ಮ ಸಮಾಜದ ಪ್ರಜ್ಞಾವಂತರೆನಿಸಿಕೊಂಡ ಬಳಕೆದಾರರ ಥರಾವರಿ ಕಮೆಂಟ್ ಓದಿ ಅಕ್ಷರಶಃ ಶಾಕ್ ಆಗಿದ್ದಾರೆ, ಖಿನ್ನತೆಗೂ ಒಳಗಾಗಿದ್ದಾರೆ. ನಿಜಕ್ಕೂ ಆ ಮಗು ಮಹಡಿಯಿಂದ ಕೆಳಕ್ಕೆ ಬೀಳುವ ಸಂದರ್ಭ ಯಾಕೆ ಬಂತು ಎಂಬುದನ್ನೂ ವಿಚಾರ ಮಾಡದೆ ಅವಳನ್ನು ಕೆಟ್ಟ ತಾಯಿ ಎಂದು ಕರೆದರು. ಇಂಥಾ ಸೌಭಾಗ್ಯಕ್ಕೆ ನಿನಗ್ಯಾಕೆ ಮಗು ಬೇಕಿತ್ತು ಎಂದು ಜರಿದರು.

ಈಗಿನ್ನೂ ಆರೇಳು ತಿಂಗಳ ಮಗುವಿದೆ ಎಂದಾದರೆ, 9 ತಿಂಗಳು ಆ ಮಗುವನ್ನು ಹೊತ್ತು-ಹೆತ್ತು ಬೆಳೆಸುತ್ತಿದ್ದ, ಈಗಷ್ಟೇ ಬಾಣಂತನದ ಆರೈಕೆ ಮುಗಿಸಿದ್ದ ಆ ತಾಯಿಯ ಮಾನಸಿಕ ಸ್ಥಿತಿ ಹೇಗಿದ್ದೀತು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದ ನಮ್ಮ ಸೋಶಿಯಲ್ ಮೀಡಿಯಾ ಶೂರರು ಈ ವಿಧಾನದಲ್ಲಿ ಆ ತಾಯಿಯನ್ನು ಹೆಚ್ಚೂಕಡಿಮೆ ಹುಚ್ಚಿಯಾಗಿಸಿದರು. ಆಕೆ ಸುಶಿಕ್ಷಿತಳು, ಮೇಲಾಗಿ ಟೆಕ್ಕಿ ಹೌದಾದರೂ, ಮಾನಸಿಕವಾಗಿ ಧೈರ್ಯಗುಂದಬಾರದು, ಖಿನ್ನತೆಗೆ ಒಳಗಾಗಬಾರದು ಎಂದೇನೂ ಇಲ್ಲವಲ್ಲ?

ಘಟನೆಯ ನಂತರ, ಆಕೆ ಮತ್ತು ಆಕೆಯ ಪತಿ ಕೊಯಮತ್ತೂರಿನ ತಮ್ಮ ಊರಿಗೆ ತೆರಳಿದ್ದರು. ತಾನು ಮಾನಸಿಕವಾಗಿ ಅನುಭವಿಸುತ್ತಿರುವ ಹಿಂಸೆ, ಯಾತನೆಯನ್ನು ಯಾರಲ್ಲೂ ಹೇಳಿಕೊಳ್ಳಲಾರದೆ, ತನ್ನದೇನೂ ತಪ್ಪಿಲ್ಲ ಎಂದು ಈ ಜಗತ್ತಿಗೆ ಅರ್ಥ ಮಾಡಿಸುವ ಗೋಜಿಗೂ ಹೋಗದೇ ನೇಣು ಬಿಗಿದು ಈ ಲೋಕದ ಯಾತ್ರೆ ಮುಗಿಸಿಬಿಟ್ಟಳು. ಈಗ, ಆಕೆಯನ್ನು ಯಾರೂ ಟ್ರೋಲ್ ಮಾಡುವುದಿಲ್ಲ. ನೀನೆಂಥಾ ತಾಯಿ ಕಣವ್ವಾ ಎಂದು ಯಾರೂ ಹಂಗಿಸುವುದಿಲ್ಲ. ಜರಿಯುವುದಿಲ್ಲ.

ಎಂಥಾ ಸಮಾಜ ಅಲ್ವಾ ನಮ್ಮದು? ಒಬ್ಬೊಬ್ಬರ ಒಂದೊಂದು ಮಾತು, ಕಮೆಂಟ್‌ಗಳೂ ಆ ತಾಯಿಗೆ ಸಾವಿನೆಡೆಯ ದಾರಿಯನ್ನೇ ತೋರಿಸಿಬಿಟ್ಟವು. ನಿಜವಾಗಿಯೂ ಯಾವುದಕ್ಕೆ ಮಹತ್ವ ಕೊಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದ ಮರ್ಕಟರಂತೆ ವರ್ತಿಸುವ ಈ ಜನರಿಗೆ ಯಾವತ್ತಾದರೂ ಬುದ್ಧಿ ಬಂದೀತಾ? ಹೋದ ಆಕೆಯ ಜೀವ ಮತ್ತೆ ಹಿಂದಿರುಗೀತಾ, ಆ ಆರೇಳು ತಿಂಗಳ ಮಗುವಿಗೆ ಮತ್ತೆ ತಾಯಿಯ ಮಮತೆಯೇ ಸಿಗದಂತಾಗಿಬಿಟ್ಟಿತಲ್ಲ…

ಯೋಚಿಸಿ ಸ್ನೇಹಿತರೇ. ಎಲ್ಲೋ ಯಾವುದೋ ಒಂದು ರೀಲ್ಸ್, ವಿಡಿಯೋ ಬಂತೆಂದರೆ, ಹಿಂದೆ ಮುಂದೆ ಯೋಚಿಸದೇ ಲೈಕ್ ಒತ್ತುವುದು, ಕಮೆಂಟ್ ಮಾಡುವುದು, ಶೇರ್ ಮಾಡಡುವುದು ಮಾಡುತ್ತೇವಲ್ಲ, ಪ್ರಯೋಜನಕ್ಕೆ ಬರುವ ಎಷ್ಟು ವಿಚಾರಗಳನ್ನು ಶೇರ್ ಮಾಡುತ್ತೇವೆ? ಉತ್ತಮ ಸಂದೇಶ ಹಂಚುವ ಯಾವ ವಿಡಿಯೋ, ರೀಲ್ಸ್ಗೆ `ಚೆನ್ನಾಗಿದೆ’ ಎನ್ನುತ್ತೇವೆ? ಯೋಚಿಸಿ. ತಲೆಯೊಳಗೆ ಮೆದುಳಿದ್ದರೆ ಅದಕ್ಕೂ ಒಂದಿಷ್ಟು ಕೆಲಸ ಕೊಡಿ. ಸುಮ್ಮನೇ ಸನ್ನಿಗೊಳಗಾದವರಂತೆ ವೈರಲ್ ಎಂದು ಬೆನ್ನುಬಿದ್ದರೆ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ.
– ಸತೀಶ್ ಭಟ್, ಮಾಗೋಡ್.


Spread the love

LEAVE A REPLY

Please enter your comment!
Please enter your name here