ಒಳ ಮೀಸಲಾತಿಯನ್ನು ಜಾತಿ ಜನಗಣತಿ ಆಧಾರದಲ್ಲಿಯೇ ಕೊಡಲಿ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನಲ್ಲಿ ನದಾಫ್/ಪಿಂಜಾರ್ ಸಮಾಜಕ್ಕೆ ಈಗಾಗಲೇ 25 ಗುಂಟೆ ಜಾಗವಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಸಮಾಜಕ್ಕೆ ಹಸ್ತಾಂತರಿಸುವದರೊಂದಿಗೆ ಸರಕಾರ ಮತ್ತು ಶಾಸಕರ ಅನುದಾನದಲ್ಲಿ 2025 ಮಾರ್ಚ್ 31ರ ಒಳಗಾಗಿ 1 ಕೋಟಿ ರೂ. ಒದಗಿಸಲಾಗುವುದು. ಸಂಘಟನೆಯ ಮುಖಂಡರು ಸೂಕ್ತ ನೀಲನಕ್ಷೆಯನ್ನು ಸಿದ್ಧಪಡಿಸಿ, ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಶನಿವಾರ ನಗರದ ಆಂಗ್ಲೋ ಉರ್ದು ಹೈಸ್ಕೂಲï ಮೈದಾನದಲ್ಲಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದ ಗದಗ ಜಿಲ್ಲಾ ಘಟಕದ ಸಹಯೋಗದಲ್ಲಿ, ಆರ್.ಆರ್. ಸಿದ್ನೆಕೊಪ್ಪ, ಐ.ಡಿ. ನದಾಫ್ ವೇದಿಕೆಯಲ್ಲಿ ನಡೆದ ಸಂಘದ 32ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ರಾಜ್ಯಮಟ್ಟದ ಮಹಿಳಾ ಸಮಾವೇಶ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಸಚಿವರು ಮಾತನಾಡಿದರು.

ನದಾಫ್/ಪಿಂಜಾರ್ ಸಮುದಾಯ ಬಾಂಧವರು ಮುಗ್ಧರು. ಹಳ್ಳಿಗಳಲ್ಲಿಯೇ ಹೆಚ್ಚಾಗಿ ಇರುವ ಜನ. ಆದರೂ ಶಿಕ್ಷಣದಲ್ಲಿ ಮೀಸಲಾತಿ, ನಿಗಮ ಮಂಡಳಿ ಸ್ಥಾಪನೆಯಾಗದಿರುವುದಕ್ಕೆ ಹೋರಾಟದ ಕೊರತೆಯೇ ಕಾರಣ. ನದಾಫ್ ಮತ್ತು ಪಿಂಜಾರ್ ಸಮುದಾಯವು ಶಿಕ್ಷಣಕ್ಕೆ ಆದ್ಯತೆ ಕೊಟ್ಟಿಲ್ಲ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನಂತರ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದಲ್ಲಿ ನದಾಫ್/ಪಿಂಜಾರ್ ಸಹ ಒಂದಾಗಿದೆ. ರಾಜ್ಯ ಸರಕಾರ ಬಡವರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದು ಶಿಕ್ಷಣಕ್ಕೆ ಆದ್ಯತೆ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಮುಸ್ಲಿಂ ಸಮುದಾಯಗಳನ್ನು ಬೇರೆ ಬೇರೆಯಾಗಿ ಭಾವಿಸಿಲ್ಲ. ಆದರೆ ಕೆಲ ಸೌಲಭ್ಯಗಳಿಗಾಗಿ ನದಾಫ್/ಪಿಂಜಾರ್ ಸಮುದಾಯ ಸಮಾವೇಶದ ಮೂಲಕ ಧ್ವನಿ ಎತ್ತಿದೆ. ಆ ಎಲ್ಲ ಬೇಡಿಕೆಗಳನ್ನು ಸಚಿವ ಎಚ್.ಕೆ. ಪಾಟೀಲರು ಸರಕಾರದ ಮೂಲಕ ಈಡೇರಿಸಲಿದ್ದಾರೆ ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಡಿ. ನದಾಫ್ ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಜ್ಯದಲ್ಲಿ ಸುಮಾರು ೩೦ ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್-ಪಿಂಜಾರ್ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದರೂ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ, ನಾವೂ ಒಳಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಒಳಮೀಸಲಾತಿಯನ್ನು ಜಾತಿ ಜನಗಣತಿ ಆಧಾರದಲ್ಲಿಯೇ ಕೊಡಲಿ. ಒಟ್ಟಿನಲ್ಲಿ ನಮಗೂ ಅಲ್ಪ ಪ್ರಮಾಣದ ಮೀಸಲಾತಿ ಸಿಗುವಂತಾಗಲಿ ಎಂದರು.

ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲಸಾಬ ಅಧ್ಯಕ್ಷತೆ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಸಂಘದ ಜಿಲ್ಲಾಧ್ಯಕ್ಷ ರಬ್ಬಾನಿ ಹುಲಕೋಟಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here