ಬೀದರ್: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಿವಿಧ ರಾಜ್ಯಕ್ಕೆ ಅಕ್ರಮವಾಗಿ ಗುಟ್ಕಾ, ಪಾನ ಮಸಾಲಾ, ತಂಬಾಕು ತಯಾರಿಸಿ ಸಾಗಿಸುತ್ತಿರುವ ಅಡ್ಡೆಯನ್ನು ಪತ್ತೆ ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ಒಂದು ಕೋಟಿಗೂ ಅಧಿಕ ಮೌಲ್ಯದ ಪಾನ ಮಸಾಲ ತಯಾರಿಕೆ ಕಚ್ಚಾವಸ್ತುಗಳು ಹಾಗೂ ಗುಟ್ಕಾ ಹಾಗೂ ಪಾನ ಮಸಾಲಾವನ್ನು ವಶಕ್ಕೆ ಪಡೆದಿದ್ದಾರೆ.
ಬೀದರನ ಕೋಳಾರ ಕೈಗಾರಿಕೆ ಪ್ರದೇಶದಲ್ಲಿರುವ ಗೋದಾಮಿನಲ್ಲಿ ವಿವಿಧ ಬ್ರ್ಯಾಂಡ್ ಹೆಸರಲ್ಲಿ ಕಚ್ಚಾ ವಸ್ತುಗಳು ಪತ್ತೆ ಮಾಡಲಾಗಿದ್ದು, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಇಲ್ಲಿ ತಯಾರಿಸುವ ಸುಮಾರು 40ಕ್ಕೂ ಅಧಿಕ ನಮೂನೆಯ ಗುಟ್ಕಾ ಪಾನಮಸಾಲಾ ಸರಬರಾಜು ಮಾಡೋ ಮಾಹಿತಿ ಮೇರೆಗೆ ಮಧ್ಯ ರಾತ್ರಿ ಕಾರ್ಯಚರಣೆ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಲಾರಿ ಚಾಲಕ ಹಾಗೂ ಕೆಲ ಸಿಬ್ಬಂದಿಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಆಹಾರ ಸುರಕ್ಷತಾಧಿಕಾರಿ, ನ್ಯೂಟೌನ್ ಠಾಣೆ ಸಿಪಿಐ ವಿಜಯಕುಮಾರ್ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ ಪಾಟೀಲ್ ಹಾಗೂ ಶಿವಕುಮಾರ್ ಸ್ವಾಮಿ,ಅಶೋಕ ಹಾಗೂ ಮಹೇಶ ಮಾಶೆಟ್ಟೆ ಸೇರಿದಂತೆ ಅಧಿಕಾರಿಗಳ ತಂಡ ಗೋದಾಮಿನಲ್ಲಿ ಠಿಕಾಣಿ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ.