ಬೆಂಗಳೂರು: ಚನ್ನಪಟ್ಟಣ ತಹಶೀಲ್ದಾರ್ ಮೇಲಿನ ಹಲ್ಲೆ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಪ್ರಕರಣದ ಸಂಪೂರ್ಣ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚನ್ನಪಟ್ಟಣ ತಹಶೀಲ್ದಾರ್ ಮೇಲಿನ ಹಲ್ಲೆ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಮೊದಲು ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತೇನೆ. ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಹುಣಸೂರು ಶಾಸಕ ಹರೀಶ್ ಗೌಡ ಅವರ ಪತ್ನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಈಗಾಗಲೇ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಟಿಯೊಬ್ಬರ ಹೆಸರಿನಲ್ಲಿ ಎಐ (AI) ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿದ ಪ್ರಕರಣವನ್ನೂ ಉಲ್ಲೇಖಿಸಿದ ಸಚಿವರು, ಇಂತಹ ಸೈಬರ್ ಪ್ರಕರಣಗಳ ತನಿಖೆಗೆ ಸ್ವಲ್ಪ ಸಮಯ ಬೇಕಾಗುತ್ತದೆ. “ಯಾರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ಪ್ರತಿಯೊಬ್ಬರಿಗೂ ನ್ಯಾಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಬರ ಪರಿಸ್ಥಿತಿ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಪರಿಸ್ಥಿತಿಯ ಸಮಗ್ರ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
“ಮುಖ್ಯಮಂತ್ರಿಗಳು ಈಗಾಗಲೇ ಅಗತ್ಯ ಸೂಚನೆ ನೀಡಿದ್ದಾರೆ. ಎನ್ಡಿಆರ್ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ವರದಿ ಸಿದ್ಧಪಡಿಸಲಾಗುತ್ತದೆ. ಜಿಲ್ಲೆಗಳಿಂದ ನೆಲಮಟ್ಟದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು,
ಬಿತ್ತನೆ, ಮೇವು, ಕುಡಿಯುವ ನೀರು ಸೇರಿದಂತೆ ಎಲ್ಲ ವಿವರಗಳನ್ನು ಒಳಗೊಂಡ ವರದಿ ಸಿದ್ಧವಾದ ಬಳಿಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಂತರ ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಬರ ಘೋಷಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ” ಎಂದು ಅವರು ಹೇಳಿದರು.



