ಚಾಮರಾಜನಗರ : ಚಳಿಗಾಲದಲ್ಲಿ ಜ್ವರ ಬಂದ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು ತಂಗಿಯನ್ನು ಕೊಂದು ತಂದೆ ಹಾಗೂ ಅತ್ತಿಗೆಗೆ ಚಾಕುವಿನಿಂದ ಚುಚ್ಚಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ.
ಐಮಾನ್ ಭಾನು(26) ಚಾಕು ಇರಿತಕ್ಕೊಳಗಾಗಿ ಮೃತಪಟ್ಟ ಮಹಿಳೆಯಾಗಿದ್ದರೆ, ಆರೋಪಿಯ ತಂದೆ ಸೈಯದ್(60) ಮತ್ತು ತಸ್ಲಿಮಾ ತಾಜ್(25) ಗಂಭೀರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೈಯದ್ ಫರ್ಮಾನ್ ಕೊಲೆ ಆರೋಪಿಯಾಗಿದ್ದಾನೆ.
ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ 31 ವರ್ಷದ ಫರ್ಮಾನ್ ತನ್ನ ಅಣ್ಣನ ಮಗಳಿಗೆ ಸೌತೆಕಾಯಿ ತಿನ್ನಿಸುತ್ತಿದ್ದಾಗ ಸಹೋದರಿ ಐಮಾನ್ ಭಾನು, ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ಏಕೆ ತಿನ್ನಿಸುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ಇಷ್ಟೆ ಈ ದುರ್ಘಟನೆಗೆ ಕಾರಣವಾಯಿತು. ಸೌತೆಕಾಯಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಐಮಾನ್ ಅವರಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ.
ಬಳಿಕ, ಜಗಳ ಬಿಡಿಸಲು ಬಂದ ತಂದೆ ಸೈಯದ್ ಮತ್ತು ಅತ್ತಿಗೆ ತಸ್ಲಿಮಾ ತಾಜ್ ಗೂ ಕೂಡ ಇರಿದಿದ್ದಾನೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಕೊಳ್ಳೆಗಾಲ ಪಟ್ಟಣ ಪೊಲೀಸರು ಆಗಮಿಸಿ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.