ವಿಜಯಸಾಕ್ಷಿ ಸುದ್ದಿ, ಗದಗ: ಇಸ್ಲಾಂ ವಾಸ್ತುಕಲೆ ಕೇವಲ ಕಟ್ಟಡ ನಿರ್ಮಾಣವಲ್ಲ, ಅದು ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕತೆ, ಅನಂತತೆ ಹಾಗೂ ಸೌಂದರ್ಯದ ಸಂಕೇತವಾಗಿದೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಫಸ್ಟ್ ಗ್ರೇಡ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಅಪ್ಪಣ್ಣ ಹಂಜೆ ಹೇಳಿದರು.
ನಗರದ ಅಬ್ದುಲ್ ಕಲಾಂ ಆರ್ಟ್ಸ್ ಅಂಡ್
ಕಾಮರ್ಸ್ ಕಾಲೇಜ್ ಇತಿಹಾಸ ವಿಭಾಗದ ಬಿ.ಎ. 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರದಿ ಮೌಲ್ಯಮಾಪನ ಕಾರ್ಯದಲ್ಲಿ ಬಾಹ್ಯ ಪರಿವೀಕ್ಷಕರಾಗಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಕಟ್ಟಡಗಳಲ್ಲಿ ಕಾಣಸಿಗುವ ಮಿಹ್ರಾಬ್, ಕಿಬ್ಲಾ, ಕಮಾನು, ಗುಮ್ಮಟ, ಮಿನಾರ ಹಾಗೂ ಜ್ಯಾಮಿತೀಯ ವಿನ್ಯಾಸಗಳು ಇಸ್ಲಾಂ ತತ್ವ-ಸಿದ್ಧಾಂತ ಮತ್ತು ನಂಬಿಕೆಗಳ ಪ್ರತೀಕಗಳಾಗಿವೆ ಎಂದು ವಿವರಿಸಿದರು.
ಮಸೀದಿ, ದರ್ಗಾ, ಈದ್ಗಾ, ಗೋರಿ ಹಾಗೂ ಸಮಾಧಿಗಳಂತಹ ಧಾರ್ಮಿಕ ಕಟ್ಟಡಗಳನ್ನು ಕೇವಲ ವಾಸ್ತುಶೈಲಿಯಾಗಿ ನೋಡದೇ, ಅವುಗಳ ಹಿಂದಿರುವ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಿಕಲ್ಪನೆಗಳೊಂದಿಗೆ ಅರ್ಥೈಸಿಕೊಳ್ಳಬೇಕು ಎಂದರು.
ಇತಿಹಾಸ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಬಾರಕೇರ ಮಾತನಾಡಿ, ಇಸ್ಲಾಂ ವಾಸ್ತುಕಲೆ ಕಲಾತ್ಮಕತೆ, ವೈಜ್ಞಾನಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಮನ್ವಯವಾಗಿದ್ದು, ವಿಭಿನ್ನ ಸಂಸ್ಕೃತಿಗಳ ನಡುವೆ ಸೌಹಾರ್ದತೆಯ ಸೇತುವೆಯಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
ಪ್ರಾಚಾರ್ಯ ಎಸ್.ಎಚ್. ಬಡೇಖಾನ ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ, ಧಾರ್ಮಿಕ ಕಟ್ಟಡಗಳ ಅಧ್ಯಯನ ಮಾಡುವಾಗ ಅವುಗಳ ತಾತ್ವಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಇಲ್ಲವಾದರೆ ಅಧ್ಯಯನ ಕೇವಲ ಭೌತಿಕ ವಿವರಣೆಗೆ ಸೀಮಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜಶಾಸ್ತ್ರ ಉಪನ್ಯಾಸಕಿ ಸವಿತಾ ಆರಾಧ್ಯಮಠ ವಂದಿಸಿದರು. ಕನ್ನಡ ಉಪನ್ಯಾಸಕಿ ಕವಿತಾ ಅಜನಾಳ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಇಸ್ಲಾಂ ವಾಸ್ತುಕಲೆಯ ಪ್ರತಿಯೊಂದು ಕಮಾನು, ಗುಮ್ಮಟ ಮತ್ತು ವಿನ್ಯಾಸವೂ ಧಾರ್ಮಿಕ ತತ್ವ ಹಾಗೂ ಆಧ್ಯಾತ್ಮಿಕ ಸಂದೇಶವನ್ನು ಹೊತ್ತಿರುತ್ತದೆ.”
ಡಾ. ಅಪ್ಪಣ್ಣ ಹಂಜೆ



