ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬಣಜಿಗ ಸಮಾಜಕ್ಕೆ ಸರಕಾರಿ ಸೌಲಭ್ಯಗಳ ಉಪಯೋಗಕ್ಕಾಗಿ 3ಎ ಮತ್ತು ಶೈಕ್ಷಣಿಕ ಸೌಲಭ್ಯಗಳಿಗೆ ಅನೂಕೂಲವಾಗುವಂತೆ 2ಎ ಜಾತಿ, ಆದಾಯ ಪ್ರಮಾಣಪತ್ರಗಳನ್ನು ನೀಡುವಂತೆ ಆಗ್ರಹಿಸಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೋಮವಾರ ತಹಸೀಲ್ದಾರರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ವಿಜಯಕುಮಾರ ಹತ್ತಿಕಾಳ, ಚಂದ್ರಶೇಖರ ಮಹಾಜನಶೆಟ್ಟರ, ಕಾನೂನು ಸಲಹೆಗಾರ ಪ್ರಕಾಶ ವಾಲಿ, ವೀರಶೈವ ಲಿಂಗಾಯತದ ಒಳಪಂಗಡದಲ್ಲಿ ಬಣಜಿಗ ಒಂದು ಜಾತಿ ಆಗಿದ್ದು ನಮ್ಮ ಪೂರ್ವಜರು ಮೂಲತಃ ವ್ಯಾಪಾರ, ಕೃಷಿ ಕಾಯಕವನ್ನು ಮಾಡುತ್ತಾ ಬರುತ್ತಿದ್ದಾರೆ. ಲಿಂಗಾಯತ ಧರ್ಮದ ಒಳಪಂಗಡವಾದ ಬಣಜಿಗ, ಹಿಂದೂ ಬಣಜಿಗ, ಲಿಂಗಾಯತ ಬಣಜಿಗ, ವೀರಶೈವ ಬಣಜಿಗ ಜಾತಿಗೆ ಸೇರಿದ್ದು, ನಮ್ಮ ಹಿರಿಯರು ಶಾಲಾ ದಾಖಲಾತಿಯಲ್ಲಿ ಒಳಪಂಗಡವನ್ನು ನಮೂದಿಸದೆ ಹಿಂದೂ ಲಿಂಗಾಯತ, ಲಿಂಗವಂತ ಅಂತ ನಮೂದಿಸಿದ್ದಾರೆ. ಇದರಿಂದ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಸಮಸ್ಯೆಯಾಗುತ್ತಿದೆ. ಲಿಂಗವಂತ ಅಂತಾ ನಮೂದ ಇರುವದರಿಂದ ಓಬಿಸಿ ಜಾತಿ ಪ್ರಮಾಣಪತ್ರವನ್ನು ನೀಡಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸರಕಾರಿ ಸೌಲಭ್ಯವನ್ನು ಪಡೆಯಲು ಹಾಗೂ ಮಕ್ಕಳು ಶೈಕ್ಷಣಿಕವಾಗಿ ವಿದ್ಯಾರ್ಥಿವೇತನ, ಉನ್ನತ ವ್ಯಾಸಂಗಕ್ಕೆ ತೊಂದರೆ ಆಗುತ್ತಿದೆ. ಸ್ಥಳೀಯವಾಗಿ, ಸಮಾಜದ, ಸಂಘದವರಿಂದ ದಾಖಲೆಗಳನ್ನು ಪರಿಶೀಲನೆ ಮಾಡಿ ಸ್ಥಾನಿಕ ವಿಚಾರಣೆಯೊಂದಿಗೆ ಬಣಜಿಗ ಪ್ರಮಾಣಪತ್ರವನ್ನು ನೀಡಲು ಅವಕಾಶವಿದ್ದು ಅದನ್ನು ಕೂಡಲೇ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ಲೋಹಿತ ನೆಲವಿಗಿ, ಹಿರಿಯರಾದ ಬಸವರಾಜ ಬೆಂಡಿಗೇರಿ, ಶಿವಯೋಗಿ ಗಾಂಜಿ, ಷಣ್ಮುಖಪ್ಪ ನಾಗನೂರ, ಈರಣ್ಣ ಅಳಗುಂಡಗಿ, ವೀರಣ್ಣ ತೆಗ್ಗಳ್ಳಿ, ವಿಜಯ ಕೊಟಗಿ, ದುಂಡೇಶ ಕೋಟಗಿ, ಪ್ರದೀಪ ಕೊಟ್ಟುರಶೆಟ್ಟರ, ಕೊಟ್ರೇಶ ಕತ್ತಿ, ಶಾಮಸುಂದರ ಗಾಂಜಿ, ವಿಜಯ ಬೂದಿಹಾಳ, ವುಳುವೆಪ್ಪ ಚೆಕ್ಕಿ, ಮಂಜುನಾಥ ಹತ್ತಿಕಾಳ, ಬಸವರಾಜ ನಾಗನೂರ, ವಡಕಣ್ಣವರ ಮುಂತಾದವರಿದ್ದರು.