ಧಾರವಾಡ: ಪೊಲೀಸರ ಮೇಲೆ ಹಲ್ಲೆ ಮಾಡಿದವರ ಕೇಸುಗಳನ್ನು ವಾಪಸ್ ಪಡೆದಿದ್ದು ಸರಿಯಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಕೇಸ್ ವಾಪಸ್ ಪಡೆಯುವುದು ಸಹಜ. ರೈತರ ಹೋರಾಟದ ಕೇಸ್ಗಳನ್ನು ವಾಪಸ್ ಪಡೆದರೆ ಸರಿ. ಆದರೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರ ಕೇಸುಗಳನ್ನು ವಾಪಸ್ ಪಡೆದಿದ್ದು ಸರಿಯಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಿದಂತಾಗುತ್ತದೆ ಎಂದರು.
ಈ ಬಗ್ಗೆ ‘ಕೈ’ ಸರ್ಕಾರ ಯೋಚಿಸಬೇಕಿತ್ತು. ಅವರಿಗೆ ಮತ್ತಷ್ಟು ಪ್ರೋತ್ಸಾಹ ಕೊಡಲು ಈ ರೀತಿ ಮಾಡಲಾಗುತ್ತಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಈ ನಿರ್ಧಾರ ಕಾನೂನಿನಡಿ ಎಷ್ಟು ನಿಲ್ಲುತ್ತದೆಯೋ ಗೊತ್ತಿಲ್ಲ. ಕೇಸಿನ ಫೈಲ್ ನೋಡಿದರೆ ಆ ಕೇಸನ್ನು ವಾಪಸ್ ಪಡೆಯಲು ಬರುವುದಿಲ್ಲ. ಆದರೂ ಕ್ಯಾಬಿನೆಟ್ನಲ್ಲಿ ಕೇಸ್ ವಾಪಸ್ ಪಡೆಯಲು ಒಪ್ಪಿಗೆ ನೀಡಲಾಗಿದೆ. ಇದು ಕಾನೂನು ಬಾಹಿರ. ಕೋರ್ಟ್ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದರೆ ಸರ್ಕಾರದ ನಿರ್ಧಾರ ಕೋರ್ಟ್ನಲ್ಲಿ ನಿಲ್ಲೋದಿಲ್ಲ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಎಂದು ಹೇಳಿದರು.








