ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಉಲ್ಲೇಖವಾಗಿರುವ ಕುರಿತು ನಟ ಪ್ರಕಾಶ್ ರಾಜ್ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದು, ಚಿನ್ನಯ್ಯ ಎಂಬ ವ್ಯಕ್ತಿ ದೂರವಾಣಿ ಮೂಲಕ ಸಂಪರ್ಕಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ ಧರ್ಮಸ್ಥಳದ ವಿರುದ್ಧದ ಯಾವುದೇ ಸಂಚು ಅಥವಾ ಷಡ್ಯಂತ್ರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕೋರ್ಟ್‌ನಲ್ಲಿ ಚಿನ್ನಯ್ಯ ನೀಡಿರುವ ಹೇಳಿಕೆಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
‘ಚಿನ್ನಯ್ಯ ನನ್ನೊಂದಿಗೆ ಮಾತನಾಡಿದ್ದಾನೆ ಎಂಬುದು ನಿಜ. ಆದರೆ ಆತ ನನ್ನನ್ನು ಭೇಟಿಯಾಗಿಲ್ಲ. ನಾನು ಕೂಡ ಅವನನ್ನು ಭೇಟಿಯಾಗಿಲ್ಲ. ಆತ ಕರೆ ಮಾಡಿ ಭೇಟಿಯಾಗಬೇಕು ಎಂದು ಕೇಳಿದಾಗ, ನೇರವಾಗಿ ಭೇಟಿಯಾಗುವ ಅಗತ್ಯವಿಲ್ಲ, ಹೇಳಬೇಕಿರುವುದನ್ನು ರೆಕಾರ್ಡ್ ಮಾಡಿ ಕಳುಹಿಸು ಎಂದು ತಿಳಿಸಿದ್ದೆ’ ಎಂದು ಹೇಳಿದರು.
ಧರ್ಮಸ್ಥಳ ಕುರಿತು ಕೇಳಿಬಂದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಪಾರದರ್ಶಕ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ಮಾತ್ರ ಎಸ್‌ಐಟಿ ರಚನೆಗೆ ಒತ್ತಾಯಿಸಿದ್ದಾಗಿ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು.
‘ನಾನು ಧರ್ಮಸ್ಥಳಕ್ಕೆ ಹೋಗಿಲ್ಲ. ಗಿರೀಶ್ ಮಟ್ಟಣ್ಣನವರ್ ಅವರನ್ನು ಭೇಟಿಯಾಗಿಲ್ಲ. ಕೇರಳದಿಂದ ಹಣ ಬಂದಿದೆ ಎಂಬ ಆರೋಪಗಳಿಗೂ ನನ್ನೊಂದಿಗೆ ಯಾವುದೇ ಸಂಬಂಧ ಇಲ್ಲ. ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತರುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.
ಚಿನ್ನಯ್ಯ ತಮ್ಮೊಂದಿಗೆ ತಮಿಳು ಭಾಷೆಯಲ್ಲಿ ಮಾತನಾಡಿದ್ದಾನೆ ಎಂದು ಹೇಳಿದ ಅವರು, ಆ ಕರೆ ಕುರಿತು ಪ್ರಣವ್ ಮೊಹಂತಿ ಅವರಿಗೆ ಮಾಹಿತಿ ನೀಡಿದ್ದೇನೆ ಎಂದರು.
‘ಈಗ ತನಿಖೆಯಲ್ಲಿ ಚಿನ್ನಯ್ಯ ಹಲವರನ್ನು ದಾರಿ ತಪ್ಪಿಸಿದ್ದಾನೆ ಎಂಬ ವಿಚಾರಗಳು ಹೊರಬರುತ್ತಿವೆ. ಸತ್ಯ ಹೊರಬರಬೇಕು ಎಂಬುದೇ ನನ್ನ ನಿಲುವು. ಆದರೆ ನನ್ನನ್ನು ಧರ್ಮಸ್ಥಳ ವಿರೋಧಿ ಅಥವಾ ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳು ಸಂಪೂರ್ಣ ಆಧಾರರಹಿತ’ ಎಂದು ಪ್ರಕಾಶ್ ರಾಜ್ ಹೇಳಿದರು.



