ಬೆಂಗಳೂರು: ನಗರದ ಕಾಫಿ ಬೋರ್ಡ್ ಸಿಗ್ನಲ್ ಸಮೀಪ ಆಟೋವೊಂದು ಪಲ್ಟಿಯಾಗಿ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಅಪಘಾತದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಮಾಹಿತಿಯ ಪ್ರಕಾರ, ಸಂಚಾರ ದಟ್ಟಣೆ ನಡುವೆ ಸಾಗುತ್ತಿದ್ದ ಆಟೋ ಚಾಲಕನ ಮುಂದೆ ಇದ್ದ ವಾಹನ ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಗಾಬರಿಗೊಂಡ ಆಟೋ ಚಾಲಕ ಕೂಡ ತಕ್ಷಣ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿದ ಆಟೋ ರಸ್ತೆ ಮೇಲೆಯೇ ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ಆಟೋ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.
ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



