ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನಮಂತ್ರಿಗಳು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ ಜಾರಿಗೆ ಬಂದರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಗದಗ ಪಟ್ಟಣದ ಜೆ.ಟಿ. ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಧಾರವಾಡ, ಜಿಲ್ಲಾ ಘಟಕ ಗದಗ ಮತ್ತು ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ ಹುಬ್ಬಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಭೆಗಳನ್ನು ಗುರುತಿಸುವ ಹಾಗೂ ಸನ್ಮಾನಿಸುವ ಕೆಲಸ ಅತ್ಯಂತ ಮಹತ್ವದ್ದು. ಸಮಾಜಕ್ಕೆ ಒಳ್ಳೆಯದನ್ನು ಮಾಡಿದರೆ, ಸಮಾಜ ಅದನ್ನು ಮೆಚ್ಚಿಕೊಂಡರೆ ಅದಕ್ಕಿಂತ ಒಳ್ಳೆಯ ಕೆಲಸ ಇನ್ನೊಂದಿಲ್ಲ. ಒಬ್ಬ ವೃದ್ಧೆಯನ್ನು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿಸಿನೋಡಿ. ಅದರಿಂದ ಸಿಗುವ ಸಂತೃಪ್ತಿಯೇ ಬೇರೆ. ಅದು ಇನ್ನಷ್ಟು ದೊಡ್ಡ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಒಬ್ಬ ಪಾಶ್ಚಿಮಾತ್ಯ ತತ್ವಜ್ಞಾನಿ ನಿನ್ನ ಜೀವನದ ಅತ್ಯಂತ ಮಹತ್ವದ ಘಳಿಗೆ ಯಾವುದೆಂದರೆ ನಾನು ನನಗಾಗಿ ಕಳೆದ ಸಮಯವೇ ನನಗೆ ಅತ್ಯಂತ ಮಹತ್ವದ ಘಳಿಗೆ, ಎಲ್ಲರಿಗಿಂತ ದೊಡ್ಡ ಗೆಳೆಯ ನಮ್ಮೊಳಗೇ ಇದ್ದಾನೆ ಎಂದರು.
ಒಮ್ಮೆ ವಿದ್ಯಾರ್ಥಿಯಾದರೆ ಸಾಯುವವರೆಗೂ ವಿದ್ಯಾರ್ಥಿಯಾಗಿರುತ್ತಾನೆ. ಶಾಲೆಯಲ್ಲಿ ಮೊದಲು ಪಠ್ಯ ಕಲಿತು ನಂತರ ಪರೀಕ್ಷೆ ಬರೆಯಬೇಕು. ಜೀವನದಲ್ಲಿ ಮೊದಲು ಪರೀಕ್ಷೆ ಬರೆದು ಪಾಠ ಕಲಿಯಬೇಕು. ಹೀಗಾಗಿ ಎರಡು ಥರದ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಿರಂತರ ಯಶಸ್ಸಿನಿಂದ ಸಮಾಜಕ್ಕೆ ಒಳ್ಳೆಯದಾದರೆ ಅವನು ಸಾಧಕನಾಗುತ್ತಾನೆ. ನಮ್ಮಲ್ಲಿರುವ ಶಿಕ್ಷಣ ಪದ್ಧತಿಯಲ್ಲಿ ಡಿಗ್ರಿಗೆ ಮಹತ್ವ ಕೊಡುತ್ತೇವೆ. ಇಂತಹ ಕೆಲಸವನ್ನು ಇಂತಹ ಡಿಗ್ರಿ ಓದಿದವರು ಮಾಡಬೇಕೆಂಬ ನಿಯಮ ಮಾಡಿಕೊಂಡಿದ್ದೇವೆ. ಆರ್ಟ್ಸ್ ಕಲಿತವರು ಆರ್ಟ್ಸ್ ಟೀಚರ್ ಆಗಬೇಕು, ಕಾಮರ್ಸ್ ಕಲಿತವರು ಬ್ಯಾಂಕ್ ಉದ್ಯೋಗಿ ಆಗಬೇಕು ಎನ್ನುವ ನಿಯಮ ಹಾಕಿಕೊಂಡಿದ್ದೇವೆ. ನಮ್ಮ ಪ್ರಧಾನ ಮಂತ್ರಿಗಳು ನೂತನ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಆರ್ಟ್ಸ್ ಓದುತ್ತ ಕಾಮರ್ಸ್ ಓದಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಸೇರಿದಂತೆ ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಬೇಕು. ಯಾಕೆ, ಏನು ಎಂಬ ಪ್ರಶ್ನೆ ಮಾಡುವ ಮನೋಭಾವನೆ ಬೆಳೆದರೆ ಜಗತ್ತು ತಾನಾಗಿಯೇ ಅರ್ಥವಾಗುತ್ತದೆ. ಯಾವುದು ಕಠಿಣ ಇದೆಯೋ ಅದನ್ನು ತಿಳಿದುಕೊಳ್ಳುವುದು ಒಂದು ಭಾಗವಾದರೆ, ಅದನ್ನು ಇನ್ನೊಬ್ಬರಿಗೆ ತಿಳಿಸಿವುದು ಇನ್ನೊಂದು ಭಾಗ. ಎಲ್ಲವನ್ನೂ ಬಾಯಿಪಾಠ ಮಾಡುವುದೇ ಜೀವನ ಆಗಿದೆ. ನನ್ನ ಪ್ರಕಾರ ಯುಪಿಎಸ್ಸಿ ಪರೀಕ್ಷಾ ಪದ್ಧತಿ ಬದಲಾಗಬೇಕು. ನಾನು ಸಾಕಷ್ಟು ಐಎಎಸ್ ಅಧಿಕಾರಿಗಳನ್ನು ನೋಡಿದ್ದೇನೆ. ಆಳುವುದು ಬೇರೆ, ಆಡಳಿತ ಮಾಡುವುದೇ ಬೇರೆ, ಈಗ ಆಳುವವರು ಆಡಳಿತ ಮಾಡಲು ಹೊರಟಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.