ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಗರಗಳು ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡಲು ಹಾಗೂ ಸಾರ್ವಜನಿಕರಲ್ಲಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಕ ಮಾಡಿರುವ ಕಮ್ಯೂನಿಟಿ ಮೊಬಿಲೈಜರ್ ಹುದ್ದೆಗಳ ಕಾರ್ಯಕ್ಷಮತೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ರಾಜ್ಯಾದ್ಯಂತ 2605 ಕಮ್ಯೂನಿಟಿ ಮೊಬಿಲೈಜರ್‌ಗಳನ್ನು ಜುಲೈ 2025ರಿಂದ ಗೌರವಧನ ಆಧಾರದ ಮೇಲೆ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದ್ದು, ಅವರಿಗೆ ಮಾಸಿಕ ₹17 ಸಾವಿರದಿಂದ ₹18 ಸಾವಿರಕ್ಕೂ ಹೆಚ್ಚು ಗೌರವಧನ ನಿಗದಿಪಡಿಸಲಾಗಿದೆ.
ಕಮ್ಯೂನಿಟಿ ಮೊಬಿಲೈಜರ್‌ಗಳ ಮುಖ್ಯ ಕರ್ತವ್ಯ ಮನೆ ಮನೆಗೆ ತೆರಳಿ ಹಸಿ-ಒಣ ಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸ್ವಚ್ಛತಾ ವಾಹನಗಳ ಕಾರ್ಯ ಪರಿಶೀಲಿಸುವುದು ಹಾಗೂ ಕಸ ವಿಲೇವಾರಿ ಕುರಿತು ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿದೆ.
ಆದರೆ, ನೆಲಮಟ್ಟದಲ್ಲಿ ಈ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿದಿನ ಬೆಳಿಗ್ಗೆ ಪೌರಕಾರ್ಮಿಕರು ನಡೆಸುವ ಸ್ವಚ್ಛತಾ ಕಾರ್ಯದ ಬಳಿ ಹೋಗಿ ಸೆಲ್ಫಿ ತೆಗೆದು ಗ್ರೂಪ್‌ಗೆ ಹಾಕುವುದೇ ಕಮ್ಯೂನಿಟಿ ಮೊಬಿಲೈಜರ್ ಕೆಲಸ ಎಂಬಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಗಲ್ಲ ಪಟ್ಟಣದ ಕೈಗಾ–ಇಲಕಲ್ಲ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಕಸದ ರಾಶಿಗಳು ಬಿದ್ದಿರುವುದು ಸ್ವಚ್ಛತಾ ಕಾರ್ಯದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪಟ್ಟಣದ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ ನಿರೀಕ್ಷಕರೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಬೆಳಿಗ್ಗೆ 6 ಗಂಟೆಯಿಂದ ಪೌರಕಾರ್ಮಿಕರ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದು ಕಮ್ಯೂನಿಟಿ ಮೊಬಿಲೈಜರ್‌ಗಳ ಜವಾಬ್ದಾರಿಯಾಗಿತ್ತು. ಆದರೆ ಆ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
“ಪೌರಕಾರ್ಮಿಕರೇ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕಮ್ಯೂನಿಟಿ ಮೊಬಿಲೈಜರ್‌ಗಳಿಗಿಂತ ಪೌರಕಾರ್ಮಿಕರ ಸಂಬಳ ಹೆಚ್ಚಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಸೂಕ್ತ.”
ಜ್ಯೋತಿ ಪಾಯಪ್ಪಗೌಡ್ರ,
ಮಾಜಿ ಸದಸ್ಯೆ, ಪಟ್ಟಣ ಪಂಚಾಯಿತಿ ನರೇಗಲ್ಲ



