ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರನ್ನು ಬಲಿ ಪಡೆದು ಪರಾರಿಯಾಗಿದ್ದ ವಾಹನವನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಪತ್ತೆ ಹಚ್ಚಿ ಹಿಟ್ ಅಂಡ್ ರನ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ 7ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ವಲ್ಲಭಾಪುರ ಗ್ರಾಮದ ಸಮೀಪ ಹಳೆ ಹಗರಿಬೊಮ್ಮನಹಳ್ಳಿ ನಿವಾಸಿ ಮುಂಡರಗಿ ನಾಗರಾಜ್ ಅವರಿಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಅಪಘಾತದ ತೀವ್ರತೆಗೆ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರಕರಣ ದಾಖಲಿಸಿಕೊಂಡ ಹಗರಿಬೊಮ್ಮನಹಳ್ಳಿ ಪೊಲೀಸರು ಆರೋಪಿತ ವಾಹನಕ್ಕಾಗಿ ಬಲೆ ಬೀಸಿದ್ದರು. ವೃತ್ತ ನಿರೀಕ್ಷಕ ವಿಕಾಸ್ ಪಿ. ಲಮಾಣಿ ಮಾರ್ಗದರ್ಶನದಲ್ಲಿ ಪಿಎಸ್ಐ ಉಮಾಪತಿ ನಾಯ್ಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಮುಖ್ಯ ಪೇದೆಗಳಾದ ಮಲ್ಲೇಶ್ ನಾಯ್ಕ, ಸಿದ್ದೇಶ್, ಶಂಕರ್ ನಾಯ್ಕ, ಭೋಜ್ಯ ನಾಯ್ಕ, ಪರಶುರಾಮ್ ವೈ., ದೊಡ್ಡ ಬಸವರಾಜ್ ಹಾಗೂ ಯಮುನಪ್ಪ ಬಂಡೆ ಸತತ ತನಿಖೆ ನಡೆಸಿ ಕೊನೆಗೆ ಅಪಘಾತ ಎಸಗಿದ ವಾಹನವನ್ನು ಬಳ್ಳಾರಿಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೊಸಪೇಟೆ ಹಾಗೂ ಕೂಡ್ಲಿಗಿ ಡಿವೈಎಸ್ಪಿ ಶ್ಲಾಘಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಸಾರ್ವಜನಿಕರೂ ಪೊಲೀಸರ ಕಾರ್ಯಕ್ಷಮತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



