ಬೆಂಗಳೂರು: ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರ ಚಿನ್ನಾಭರಣ ಪಡೆದು ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪದಡಿ ಬೆಂಗಳೂರಿನ ಜ್ಯುವೆಲರಿ ಶಾಪ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯು ಅಂಗಡಿ ಮುಚ್ಚಿ ತಲೆಮರೆಸಿಕೊಂಡಿದ್ದಾನೆ.
ರಾಘವೇಂದ್ರ ಜ್ಯುವೆಲರಿ ಶಾಪ್ ಮಾಲೀಕ ತೇಜಸ್ ಗೌಡ ಅಲಿಯಾಸ್ ಮೂರ್ತಿ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ. ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರ ಮಾಹಿತಿ ಸಂಗ್ರಹಿಸಿ, ಕಡಿಮೆ ಬಡ್ಡಿಗೆ ಹೆಚ್ಚಿನ ಸಾಲ ನೀಡುವುದಾಗಿ ಆಮಿಷ ಒಡ್ಡುತ್ತಿದ್ದ ಎನ್ನಲಾಗಿದೆ.
ಗ್ರಾಹಕರು ನಂಬಿದ ಬಳಿಕ ಅವರ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು, ತನ್ನದೇ ಜ್ಯುವೆಲರಿ ಅಂಗಡಿಯಲ್ಲಿ ಇಟ್ಟುಕೊಳ್ಳುತ್ತಿದ್ದ. ಕಳೆದ ಒಂದು ವರ್ಷದಿಂದ ಇದೇ ಮಾದರಿಯಲ್ಲಿ ವಂಚನೆ ನಡೆಸಿದ್ದ ಆರೋಪಿ, ಕಳೆದ ಮೂರು ತಿಂಗಳಿಂದ ಅಂಗಡಿ ಮುಚ್ಚಿ ಪರಾರಿಯಾಗಿದ್ದಾನೆ.
ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಅವರಿಗೆ ಮಾತ್ರವೇ 50 ಲಕ್ಷ ರೂ.ಕ್ಕೂ ಅಧಿಕ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.



