ಬಳ್ಳಾರಿ: ದೇಶದ ಎರಡನೇ ಅತಿದೊಡ್ಡ ಖಾಸಗಿ ವಲಯದ ಉಕ್ಕು ಕಂಪನಿಗಳಲ್ಲಿ ಒಂದಾದ ಜೆಎಸ್‌ಡಬ್ಲ್ಯೂ ಜಿಂದಾಲ್ ಕಾರ್ಖಾನೆ ₹20 ಕೋಟಿಗೂ ಅಧಿಕ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ತೆರಿಗೆ ವಸೂಲಿಗೆ ಸ್ಥಳೀಯ ಆಡಳಿತ ಹರಸಾಹಸ ಪಡುತ್ತಿದೆ.
ಸಂಡೂರು ತಾಲೂಕಿನ ತೋರಣಗಲ್ ಸಮೀಪದಲ್ಲಿರುವ ಜಿಂದಾಲ್ ಕಾರ್ಖಾನೆ ಹಲವು ವರ್ಷಗಳಿಂದ ಆಸ್ತಿ ಹಾಗೂ ಅಭಿವೃದ್ಧಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ.
ತೆರಿಗೆ ಪಾವತಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಜಿಂದಾಲ್ ಆಡಳಿತ ಮಂಡಳಿ ಯಾವುದೇ ಸ್ಪಂದನೆ ನೀಡಿಲ್ಲ ಎನ್ನಲಾಗಿದೆ. ಇದರಿಂದ ಬಾಕಿ ತೆರಿಗೆ ವಸೂಲಿ ಮಾಡುವುದು ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
1994ರಲ್ಲಿ ತೋರಣಗಲ್ ಸಮೀಪ ವಿಜಯನಗರ ಸ್ಟೀಲ್ ಲಿಮಿಟೆಡ್ ಹೆಸರಿನಲ್ಲಿ ಈ ಕಾರ್ಖಾನೆ ಸ್ಥಾಪನೆಯಾಗಿತ್ತು. ಬಳಿಕ ಇದು ವ್ಯಾಪಕವಾಗಿ ವಿಸ್ತಾರಗೊಂಡು ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬಿಣ, ಸಿಮೆಂಟ್, ಪೇಂಟ್ ಸೇರಿದಂತೆ ವಿವಿಧ ಕೈಗಾರಿಕಾ ಚಟುವಟಿಕೆಗಳನ್ನು ನಡೆಸುತ್ತಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಜಿಂದಾಲ್ ಕಾರ್ಖಾನೆಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಿಗೆ ಸಮರ್ಪಕ ಉದ್ಯೋಗಾವಕಾಶ ನೀಡುವುದಿಲ್ಲ. ಈಗ ತೆರಿಗೆ ಪಾವತಿಸುವುದಕ್ಕೂ ಹಿಂದೇಟು ಹಾಕುತ್ತಿದೆ. ಇಂತಹ ನಡೆ ಒಪ್ಪಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಶಾಸಕ ಭರತ್ ರೆಡ್ಡಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ತೆರಿಗೆ ವಸೂಲಿಗೆ ಮುಂದಿನ ಕಾನೂನು ಕ್ರಮಗಳ ಕುರಿತು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.



