ಗುರು ಎಂದರೆ ಬೆಳಕು, ಅರಿವು, ಜ್ಞಾನ

0
abhinandana
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗುರು ಎಂದರೆ ಬೆಳಕು, ಅರಿವು, ಜ್ಞಾನ. ನಮ್ಮ ದೇಶದಲ್ಲಿ ಶಿಕ್ಷಕರಿಗೆ ಅಪಾರ ಗೌರವವಿದೆ. ಅದಕ್ಕಾಗಿ ಶಿಕ್ಷಕರು ಸಮಾಜದ ಜ್ಞಾನದ ಹರಿಕಾರರು ಎನ್ನಬಹುದಾಗಿದೆ ಎಂದು ಕಪ್ಪತ್ತಗಿರಿ ನಂದಿವೇರಿಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದರು.

Advertisement

ಅವರು ಪಟ್ಟಣದ ಶ್ರೀ ಶಂಕರಭಾರತಿ ಸಮುಧಾಯಭವನದಲ್ಲಿ ರವಿವಾರ ಸಾಹಿತಿ ಹಾಗೂ ತಾಲೂಕಿನ ಉಂಡೆನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಡಿ.ಎಫ್. ಪಾಟೀಲರ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಶಿಷ್ಯಬಳಗ, ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು.

ಇಂದು ಕೆಲಸ ಮಾಡಿದ್ದರ ಬೆಳಕು ಸಮಾಜದ ಮೇಲೆ ಬೀಳುತ್ತದೆ. ಅಂತಹ ಮಾದರಿ ವೃತ್ತಿಯಲ್ಲಿ ಸುಮಾರು 38 ವರ್ಷಗಳ ಕಾಲ ಪ್ರಾಮಾಣಿಕವಾಗಿ, ನೇರ ನಡೆನುಡಿಯಿಂದ ತಮ್ಮ ವೃತ್ತಿಗೆ ನ್ಯಾಯಯುತವಾಗಿ ನಡೆದುಕೊಂಡಿರುವ ಡಿ.ಎಫ್. ಪಾಟೀಲರ ಸೇವೆ ಮತ್ತೊಬ್ಬರಿಗೆ ಮಾದರಿಯಾಗಿದೆ. ಅವರ ನಿವೃತ್ತ ಜೀವನ ಸದಾ ಕಾಲ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಸಮಾರಂಭವನ್ನು ಉದ್ಘಾಟಿಸಿದ ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮತ್ತು ಅಧ್ಯಕ್ಷತೆ ವಹಿಸಿದ್ದ ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯದು. ಆದರೆ, ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ.

ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮ ಸೇವಾವದಿಯಲ್ಲಿ ಸಾವಿರಾರು ಮಕ್ಕಳನ್ನು ಉನ್ನತ ಹುದ್ದೆಗೇರುವಂತೆ ಮಾಡಿದ ಕೀರ್ತಿ ಡಿ.ಎಫ್. ಪಾಟೀಲರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆರ್.ಎನ್. ಪಾಟೀಲ, ಲಲಿತಾ ಕೆರಿಮನಿ, ಎನ್.ಡಿ. ಕಗ್ಗಲಗೌಡ್ರ, ವೀರಣ್ಣ ಅಳ್ಳಳ್ಳಿ, ಡಿ.ಎಚ್. ಪಾಟೀಲ, ಬಿ.ಎಸ್. ಹರ್ಲಾಪೂರ, ಮಲ್ಲಿಕಾರ್ಜುನ ಕಳಸಾಪೂರ, ಬಿ.ಪಿ. ಪಟ್ಟಣಶೆಟ್ಟಿ, ಕೆ.ಎ. ಬಳಿಗೇರ, ಕೆ.ಎಸ್. ಕೊಡ್ಲಿವಾಡ, ವಿ.ಬಿ. ದನದಮನಿ, ಸೌಮಶ್ರೀ, ರವಿಶಂಕರ ಕಳ್ಳಿಗುಡ್ಡ, ಸಚಿನ್ ಕೊಡ್ಲಿವಾಡ ಹಾಗೂ ಶಿಷ್ಯಬಳಗ, ಗುರುವೃಂದ, ಅಭಿಮಾನಿಬಳಗ ಸೇರಿದಂತೆ ಅನೇಕರಿದ್ದರು. ಕೆ.ಎಸ್. ಕೊಡ್ಲಿವಾಡ ಸ್ವಾಗತಿಸಿದರು. ಈಶ್ವರ ಮೇಡ್ಲೇರಿ ನಿರೂಪಿಸಿದರು. ವಿಭಾ ಸಚಿನ್ ವಂದಿಸಿದರು.

ಶಿಕ್ಷಕರಾದವರು ಹೆಮ್ಮೆ ಪಡಬೇಕು. ಯಾಕೆಂದರೆ, ಇದು ನಿಮ್ಮ ಹಿರಿಯರ ಪುಣ್ಯ ಕಾರಣವಾಗಿದೆ. ಶಿಕ್ಷಕರಾದವರಲ್ಲಿ ವೃತ್ತಿಗೆ ಬದ್ಧರಾಗಿ, ಆತ್ಮಸಾಕ್ಷಿಯಾಗಿ ದುಡಿಯುವ ಬದ್ಧತೆ, ಶಿಕ್ಷಕರು ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಅಲ್ಲಿ ಹೋಗಲೆ ಬಾರದು ಎನ್ನುವ ಶುದ್ಧತೆ ಹಾಗೂ ಮಕ್ಕಳಿಗೆ ಪಾಠ ಮಾಡುವಲ್ಲಿ ಅವಶ್ಯಕ ಸಿದ್ಧತೆ ಇರಬೇಕು. ಅದಕ್ಕಾಗಿ ಶಿಕ್ಷಕರಲ್ಲಿ ಬದ್ಧತೆ, ಶುದ್ಧತೆ ಹಾಗೂ ಸಿದ್ಧತೆ ಅವಶ್ಯ. ಈ ಸಂಸ್ಕಾರ ಎಲ್ಲರಲ್ಲಿ ಬರಬೇಕು. ಅಂತಹ ಸೃಜನಶೀಲ ಕೆಲಸ ದೊರಕಿರುವದಕ್ಕೆ ಶಿಕ್ಷಕರಾದವರು ಹೆಮ್ಮೆ ಪಡಬೇಕು ಎಂದು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here