ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳ ಚುನಾಯಿತ ಕೌನ್ಸಿಲ್ ಅವಧಿಯು 5 ವರ್ಷ ಮುಗಿದ ನಂತರ ಯಾವುದೇ ಕಾರಣಕ್ಕೂ ನಾಮ ನಿರ್ದೇಶನ ಮಾಡಲ್ಪಟ್ಟ ಸದಸ್ಯರು ಆಯಾ ಸಂಸ್ಥೆಯಲ್ಲಿ ಸದಸ್ಯರಾಗಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.
ಪಟ್ಟಣದ ಪುರಸಭೆಯ ಆಡಳಿತ ಮಂಡಳಿ ಸದಸ್ಯರ ಅವಧಿ ಮುಕ್ತಾಯಗೊಂಡಿದ್ದು, ನಾಮನಿರ್ದೇಶಿತ ಸದಸ್ಯರ ಅವಧಿ ಅಬಾಧಿತ ಎನ್ನುವ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆನಲ್ಲಿ ಅವರು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ನ. 4ರಂದು ಪುರಸಭೆಯ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಆಡಳಿತಾಧಿಕಾರಿಯನ್ನಾಗಿ ಸರಕಾರ ನೇಮಕ ಮಾಡಿರುವುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ. ಸರಕಾರವು ಕರ್ನಾಟಕ ಪುರಸಭೆ ಕಾಯ್ದೆ 1964ರ ನಿಯಮ 11 ಉಪನಿಯಮ (1)(ಡಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆಯಾ ಸ್ಥಳೀಯ ನಾಗರೀಕನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ನೇಮಕ ಮಾಡಲಾಗುತ್ತದೆ.
ಈ ರೀತಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿಸಲ್ಪಟ್ಟ ಸದಸ್ಯರ ಅಧಿಕಾರ ಅವಧಿಯು ಕರ್ನಾಟಕ ಪುರಸಭೆಯ ಕಾಯ್ದೆ 1964ರ ನಿಯಮ 18ರಲ್ಲಿ ತಿಳಿಸಿರುವಂತೆ ಚುನಾವಣಿತ ಸದಸ್ಯರ ಅವಧಿಯು ಹಾಗೂ ನಾಮ ನಿರ್ದೇಶಿಸಲ್ಪಟ್ಟ ಸದಸ್ಯರ ಅವಧಿಯು ಆಯಾ ಸ್ಥಳೀಯ ಸಂಸ್ಥೆಯ ಪ್ರಥಮ ಸಭೆಯ ದಿನಾಂಕದಿಂದ 5 ವರ್ಷದ ಅವಧಿಗೆ ಒಳಪಟ್ಟಿರುತ್ತದೆ. ಅಲ್ಲಿಗೆ ನಾಮನಿರ್ದೇಶಿತ ಸದಸ್ಯರ ಅವಧಿಯು ಮುಕ್ತಾಯವಾಗಿರುತ್ತದೆ. ಇದನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಪ್ರಕಾಶ ಉದ್ದನಗೌಡ್ರು, ಮಲ್ಲನಗೌಡ ಪಾಟೀಲ, ಪ್ರವೀಣ್ ದಶಮನಿ, ಶ್ರೇಯಾಂಕ ಹಿರೇಮಠ, ಚಂದ್ರು ಮುಳುಗುಂದ, ಅರ್ಜುನ ಭಾಂಡಗೆ ಮುಂತಾದವರಿದ್ದರು.



