ನವದೆಹಲಿ: ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕಕ್ಕೆ ಆದೇಶಿಸಿದೆ.
ಇಂದು ಬೆಳಗ್ಗೆ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ, ಕರ್ನಾಟಕವು ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್‌ನಂತೆ 15 ದಿನಗಳ ಕಾಲ ಒಟ್ಟು 3.91 ಟಿಎಂಸಿ ನೀರನ್ನು ಹರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಇದೀಗ ಈ ಶಿಫಾರಸನ್ನು ಜಾರಿಗೊಳಿಸುವಂತೆ CWMA ಕರ್ನಾಟಕಕ್ಕೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಕೆಆರ್‌ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಪ್ರಾಧಿಕಾರದ ಮುಂದೆ ಮನವಿ ಮಾಡಿತ್ತು.
ಆದರೆ ಕರ್ನಾಟಕ ಸರ್ಕಾರದ ಮನವಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪಿಕೊಂಡಿಲ್ಲ. ಹೀಗಾಗಿ CWRC ಮಾಡಿದ್ದ ಶಿಫಾರಸಿನಂತೆ ಪ್ರತಿದಿನ 3,000 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲಾಗಿದೆ. ಈ ಆದೇಶವು ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.



