HomeKarnataka NewsKPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಶಿವಶಂಕರಪ್ಪ ಸಾಹುಕಾರ್ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಶಿವಶಂಕರಪ್ಪ ಸಾಹುಕಾರ್ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸಾಹುಕಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠದಲ್ಲಿ ಸಾಹುಕಾರ್ ಅವರ ಅರ್ಜಿಯ ವಿಚಾರಣೆ ನಡೆದಿದ್ದು, ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ವಿಚಾರಣೆ ವೇಳೆ ಸಾಹುಕಾರ್ ಪರ ವಕೀಲ ಅರುಣ್ ಶಾಮ್ ವಾದ ಮಂಡಿಸಿ, ಪ್ರಕರಣದಲ್ಲಿ ಸಾಹುಕಾರ್ ಅವರನ್ನು ಸಿಲುಕಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದರು. ಪ್ರಕರಣದ ಪರೀಕ್ಷಾ ನಿಯಂತ್ರಕರು ಹಾಗೂ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ ತನಿಖೆಯಲ್ಲೂ ಸಾಹುಕಾರ್ ವಿರುದ್ಧ ಯಾವುದೇ ಮಹತ್ವದ ಅಂಶ ಪತ್ತೆಯಾಗಿಲ್ಲ. ಅವರ ಮೊಬೈಲ್ ಫೋನ್ ಮಾತ್ರ ಜಪ್ತಿ ಮಾಡಲಾಗಿದ್ದು, ಇದನ್ನು ಹೊರತುಪಡಿಸಿ ಅವರಿಂದ ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ವಾದಿಸಿದರು.

ಈ ವೇಳೆ ನ್ಯಾಯಪೀಠವು KPSCಯಿಂದ ಪೊಲೀಸರು OMR ಶೀಟ್‌ಗಳನ್ನು ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವ ವಿಚಾರವನ್ನು ಪ್ರಸ್ತಾಪಿಸಿತು. ಇದನ್ನು ಹೊರತುಪಡಿಸಿ ಸಾಹುಕಾರ್ ವಿರುದ್ಧ ಬೇರೆ ಯಾವುದೇ ಪ್ರಕರಣವಿದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಾಹುಕಾರ್ ಪರ ವಕೀಲರು, ಇದನ್ನು ಹೊರತುಪಡಿಸಿ ಯಾವುದೇ ಪ್ರಕರಣವಿಲ್ಲ ಎಂದು ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಎಸ್‌.ಪಿ.ಪಿ. ಎನ್‌. ಜಗದೀಶ್, ಸಾಹುಕಾರ್ ಅವರು ತಮ್ಮ ಕುಟುಂಬ ಸದಸ್ಯರಿಗೆ ಮಾತ್ರವಲ್ಲದೆ ಇತರರಿಗೂ ಕೆಲಸ ಕೊಡಿಸಿರುವ ಆರೋಪವಿದೆ ಎಂದು ನ್ಯಾಯಪೀಠದ ಮುಂದೆ ವಾದಿಸಿದರು. ಸಾಹುಕಾರ್ ಅವರನ್ನು ಬಂಧಿಸಲೇಬೇಕು ಎಂಬ ಉದ್ದೇಶವಿದ್ದರೆ ಈ ವೇಳೆಗೆ ಬಂಧಿಸುತ್ತಿದ್ದೆವು. ಆದರೆ ಅವರ ವಿರುದ್ಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ, KPSC ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾಹುಕಾರ್ ಅವರು ತಮ್ಮ ಕಚೇರಿಯನ್ನು ಪುತ್ರ ಹಾಗೂ ಪುತ್ರಿಯರು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಬಗ್ಗೆಯೂ ಸರ್ಕಾರಿ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠವು ಶಿವಶಂಕರಪ್ಪ ಸಾಹುಕಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದಾಗಿ ಕೆಳ ನ್ಯಾಯಾಲಯದ ಬಳಿಕ ಹೈಕೋರ್ಟ್‌ನಲ್ಲೂ ನಿರೀಕ್ಷಣಾ ಜಾಮೀನು ಸಿಗದಂತಾಗಿದ್ದು, ಸಾಹುಕಾರ್ ಅವರಿಗೆ ಬಂಧನದ ಆತಂಕ ಎದುರಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img