ಬೆಂಗಳೂರು:ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಿದ್ದು, ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ ಹಾಗೂ ಕ್ಷಮಾ ಮಿಶ್ರಾ ಅವರನ್ನೊಳಗೊಂಡ ತಂಡ ಇದರಲ್ಲಿದೆ. ಹಿರಿಯ ಹಾಗೂ ಅನುಭವಿ ಅಧಿಕಾರಿಗಳ ತಂಡವನ್ನೇ ರಚಿಸುವಂತೆ ಕೋರ್ಟ್ ಆದೇಶದಲ್ಲಿ ಸೂಚಿಸಿದೆ.
ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅಗತ್ಯ ಸಹಕಾರ ನೀಡುವಂತೆಯೂ ಎಸ್ಐಟಿಗೆ ಹೈಕೋರ್ಟ್ ಸೂಚನೆ ನೀಡಿದೆ. ನೂರು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿರುವ ಕೋರ್ಟ್, ಪ್ರತಿ ಮೂವತ್ತು ದಿನಗಳಿಗೊಮ್ಮೆ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.
ಒಂದು ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಸ್ಐಟಿಗೆ ವರ್ಗಾಯಿಸುವಂತೆ ಸಿಐಡಿಗೆ ಕೋರ್ಟ್ ನಿರ್ದೇಶಿಸಿದೆ. ಜೊತೆಗೆ, ಎಸ್ಐಟಿಯನ್ನು ಪ್ರತ್ಯೇಕ ಪೊಲೀಸ್ ಠಾಣೆಯನ್ನಾಗಿ ಪರಿಗಣಿಸಿ ಅಗತ್ಯ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೂ ಹೈಕೋರ್ಟ್ ಸೂಚನೆ ನೀಡಿದೆ.



