HomeKarnataka NewsKERC ಅನುಮೋದನೆ ಇಲ್ಲದೆ ಮೇಲ್ವಿಚಾರಣಾ ಶುಲ್ಕ ಪರಿಷ್ಕರಿಸುವ ಅಧಿಕಾರ KPTCL ಗೆ ಇಲ್ಲ; ಹೈಕೋರ್ಟ್

KERC ಅನುಮೋದನೆ ಇಲ್ಲದೆ ಮೇಲ್ವಿಚಾರಣಾ ಶುಲ್ಕ ಪರಿಷ್ಕರಿಸುವ ಅಧಿಕಾರ KPTCL ಗೆ ಇಲ್ಲ; ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅನುಮೋದನೆ ಇಲ್ಲದೆ ಸ್ವಯಂ ಪ್ರೇರಿತವಾಗಿ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸುವ ಗ್ರಾಹಕರಿಂದ ವಸೂಲಿ ಮಾಡುವ ಮೇಲ್ವಿಚಾರಣಾ ಶುಲ್ಕವನ್ನು ಪರಿಷ್ಕರಿಸುವ ಅಧಿಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್) ಇಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮಹಾರಾಷ್ಟ್ರ ಮೂಲದ ಅನುಷ್ಕಾ ರಿಯಾಲ್ಟಿ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ, ಕೆಪಿಟಿಸಿಎಲ್ ಹೊರಡಿಸಿದ್ದ 1.2 ಕೋಟಿ ರೂಪಾಯಿ ಬೇಡಿಕೆ ನೋಟಿಸ್ ಅನ್ನು ರದ್ದುಗೊಳಿಸಿದೆ. ಅಲ್ಲದೆ, ಕೆಇಆರ್‌ಸಿ ನಿಗದಿಪಡಿಸಿರುವ ನಿಯಮಾವಳಿಗಳ ಪ್ರಕಾರವೇ ಮೇಲ್ವಿಚಾರಣಾ ಶುಲ್ಕವನ್ನು ಪಾವತಿಸುವಂತೆ ನಿರ್ದೇಶನ ನೀಡಿದೆ.

ಸ್ವಯಂ ನಿರ್ವಹಣೆಯಡಿ ಕೈಗೊಳ್ಳುವ ವಿದ್ಯುತ್ ಕಾಮಗಾರಿಗಳಿಗೆ ಸಂಬಂಧಿಸಿದ ಮೇಲ್ವಿಚಾರಣಾ ಶುಲ್ಕವನ್ನು ಪರಿಷ್ಕರಿಸುವ ಅಧಿಕಾರ ಕೆಪಿಟಿಸಿಎಲ್‌ಗೆ ಇಲ್ಲ. ಇಂತಹ ಶುಲ್ಕಗಳ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅನುಮೋದನೆ ಕಡ್ಡಾಯವಾಗಿದ್ದು, ಕೆಇಆರ್‌ಸಿ ಒಪ್ಪಿಗೆ ಇಲ್ಲದೆ ಕೆಪಿಟಿಸಿಎಲ್ ಏಕಪಕ್ಷೀಯವಾಗಿ ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 39ರಿಂದ 41ರವರೆಗೆ ರಾಜ್ಯ ಪ್ರಸರಣ ಸಂಸ್ಥೆಗಳ ಕಾರ್ಯ ಮತ್ತು ಕರ್ತವ್ಯಗಳನ್ನು ಮಾತ್ರ ನಿರ್ದಿಷ್ಟಪಡಿಸಿದ್ದು, ಮೇಲ್ವಿಚಾರಣಾ ಶುಲ್ಕವನ್ನು ನಿಗದಿಪಡಿಸುವ ಅಥವಾ ಪರಿಷ್ಕರಿಸುವ ಅಧಿಕಾರವನ್ನು ಕೆಪಿಟಿಸಿಎಲ್‌ಗೆ ನೀಡಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಕೆಇಆರ್‌ಸಿ ನಿಗದಿಪಡಿಸಿರುವ ಮಿತಿಯನ್ನು ಮೀರಿ ಅನುಷ್ಕಾ ರಿಯಾಲ್ಟಿ ಕಂಪನಿಗೆ 1.2 ಕೋಟಿ ರೂಪಾಯಿ ಮೇಲ್ವಿಚಾರಣಾ ಶುಲ್ಕ ವಿಧಿಸಿರುವುದು ಕಾನೂನುಬಾಹಿರವಾಗಿದೆ. ಅಧಿಕಾರವಿಲ್ಲದ ಸಂಸ್ಥೆ ಹೊರಡಿಸಿದ ಬೇಡಿಕೆ ನೋಟಿಸ್‌ಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಬೆಂಗಳೂರು ನಗರದಲ್ಲಿ ಬಹುಮಹಡಿ ವಸತಿ ಯೋಜನೆ ಅಭಿವೃದ್ಧಿಪಡಿಸುತ್ತಿದ್ದ ಅನುಷ್ಕಾ ರಿಯಾಲ್ಟಿ ಸಂಸ್ಥೆ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ಸ್ವತಃ ನಿರ್ವಹಿಸಲು ಮುಂದಾಗಿತ್ತು. ಇಂತಹ ಸಂದರ್ಭಗಳಲ್ಲಿ ಕಾಮಗಾರಿಗಳ ಮೇಲ್ವಿಚಾರಣೆಗಾಗಿ ಕೆಪಿಟಿಸಿಎಲ್ ಶುಲ್ಕ ವಸೂಲಿ ಮಾಡಲು ಅವಕಾಶವಿದೆ.

ಕೆಇಆರ್‌ಸಿ ನಿಯಮಗಳ ಪ್ರಕಾರ, ಮೇಲ್ವಿಚಾರಣಾ ಶುಲ್ಕವು ಕಾಮಗಾರಿಯ ಅಂದಾಜು ವೆಚ್ಚದ ಶೇಕಡ 10 ಅಥವಾ ಗರಿಷ್ಠ 15 ಲಕ್ಷ ರೂಪಾಯಿ – ಇವೆರಡರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಸೀಮಿತವಾಗಿರಬೇಕು. ಆದರೆ, ಕೆಪಿಟಿಸಿಎಲ್ 15 ಲಕ್ಷ ರೂಪಾಯಿ ಬದಲಿಗೆ 1.2 ಕೋಟಿ ರೂಪಾಯಿ ಪಾವತಿಸುವಂತೆ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅನುಷ್ಕಾ ರಿಯಾಲ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ಕಂಪನಿಯ ಪರವಾಗಿ ಮಹತ್ವದ ತೀರ್ಪು ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img