ಲಕ್ಕುಂಡಿಗೆ ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಉದಯಪುರ/ಗದಗ: ಗದಗ ಜಿಲ್ಲೆಯ ಲಕ್ಕುಂಡಿಯನ್ನು ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನವನ್ನು ದೊರಕಿಸಲು ಕರ್ನಾಟಕ ಸರ್ಕಾರ ಕಾರ್ಯೋನ್ಮುಖವಾಗಿದೆ. ತನ್ಮೂಲಕ ಕರ್ನಾಟಕವನ್ನು ಪಾರಂಪರಿಕ ಪ್ರವಾಸೋದ್ಯಮದ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಪ್ರಕಟಿಸಿದರು.

Advertisement

ರಾಜಸ್ಥಾನದ ಉದಯಪುರದಲ್ಲಿ ಅಕ್ಟೋಬರ್ 14 ಮತ್ತು 15ರಂದು ನಡೆಯುತ್ತಿರುವ ಪ್ರವಾಸೋದ್ಯಮದ ಹೊಸ ಉಪಕ್ರಮಗಳ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವರ ಸಮ್ಮೇಳನದ ಮೊದಲ ದಿನವಾದ ಮಂಗಳವಾರ ಸಚಿವರು ಮಾತನಾಡುತ್ತಿದ್ದರು.

ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮದ 50 ತಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಕರ್ನಾಟಕ ಸರ್ಕಾರವು ಗದಗ, ಹಂಪಿ, ಮೈಸೂರು ಮತ್ತು ಉಡುಪಿಗಳನ್ನು ಭವಿಷ್ಯೋತ್ತರ ಜಾಗತಿಕ ತಾಣಗಳೆಂದು ಪರಿಗಣಿಸುವಂತೆ ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ.

ಪಾರಂಪರಿಕ ಜಾಗತಿಕ ತಾಣದ ಎಲೆಮರೆಯ ಕಾಯಿಯಂತೆ ಅನರ್ಘ್ಯ ರತ್ನದಂತಹ ತಾಣವಾಗಿರುವ ಗದಗ ಪರಂಪರೆ, ನಿಸರ್ಗ ಮತ್ತು ಸಂಸ್ಕೃತಿಗಳ ಸಮ್ಮೀಲನವಾಗಿ ಪರಿಪಕ್ವವಾದ ಸೌಹಾರ್ದತೆಯನ್ನು ಪಡೆದಿದ್ದು, ಗದಗ ಜಿಲ್ಲೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 40 ನಿಮಿಷಗಳ ಪ್ರಯಾಣದ ದೂರದಲ್ಲಿದೆ. ಗದಗಿನಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಲಕ್ಕುಂಡಿ ಚಾಲುಕ್ಯರ ಶಿಲ್ಪಕಲೆಯ ಬಯಲು ವಸ್ತುಸಂಗ್ರಹಾಲಯವೆಂದು ಕರೆಯಲ್ಪಡುತ್ತದೆ. 100 ಗಹನವಾದ ಕೆತ್ತನೆಯ ದೇವಾಲಯಗಳು, ಆಳವಾದ ಬಾವಿಗಳು, ಜೈನ ಬಸದಿಗಳು ಮತ್ತು ಪ್ರಾಚೀನ ಯುಗದ ಶಿಲ್ಪಕಲೆಯ ಚಾಣಾಕ್ಷತನವನ್ನು ಪ್ರತಿಬಿಂಬಿಸುವ ಶಿಲಾಶಾಸನಗಳನ್ನು ಹೊಂದಿದೆ.

ಗದಗ ನಗರವು ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ಡಂಬಳದ ದೊಡ್ಡಬಸಪ್ಪನ ದೇವಸ್ಥಾನಗಳು ಮತ್ತು ಪ್ರಾಚೀನ ಕೋಟೆಗಳು ಭಾರತೀಯ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ ರಾಜಮನೆತನಗಳ ಕಥೆಗಳನ್ನು ವರ್ಣಿಸುತ್ತಿವೆ. ಗದಗಿನ ಭಾರತ ರತ್ನ ಪಂಡಿತ ಭೀಮಸೇನ್ ಜೋಶಿಯವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿ, ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ವಿಶ್ವದಲ್ಲಿ ಹಾಸುಹೊಕ್ಕಾಗುವಂತೆ ಮಾಡಿದರು ಎಂದು ಸಚಿವರು ವಿವರಿಸಿದರು.

ಕಳೆದ 2 ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ಸವದತ್ತಿ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ, ಅಂಜನಾದ್ರಿ ಬೆಟ್ಟ, ಹಂಪಿ, ಮೈಸೂರು, ಬೀದರ, ಉಡುಪಿ ಹಾಗೂ ಬೆಂಗಳೂರು ಬಳಿಯ ರೋರಿಕ್ ಎಸ್ಟೇಟ್‌ಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಕಾಲಮಿತಿಗೊಳಪಟ್ಟು ಈ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದೆ. 343 ಕಿ.ಮೀ ಉದ್ದದ ಕರಾವಳಿಯನ್ನು ಕೇಂದ್ರೀಕೃತವಾಗಿಸಿ, ಅಭಿವೃದ್ಧಿಪಡಿಸಿ ಉನ್ನತ ಸ್ಥರದ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿಯನ್ನು ಸಿದ್ಧಪಡಿಸುತ್ತಿದೆ ಎಂದು ಸಭೆಗೆ ವಿವರಿಸಿದರು.

ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹಾಗೂ ಎಲ್ಲಾ ರಾಜ್ಯದ ಪ್ರವಾಸೋದ್ಯಮ ಸಚಿವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಭಾರತವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಕರ್ನಾಟಕ ಬದ್ಧವಾಗಿದೆ. ಕೇಂದ್ರ ಮತ್ತು ಇತರ ರಾಜ್ಯಗಳ ಸಂಯೋಜನೆಯೊಂದಿಗೆ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಶಕ್ತಿ ಕೇಂದ್ರವನ್ನಾಗಿಸಲು ಕರ್ನಾಟಕವು ತನ್ನೆಲ್ಲಾ ಶಕ್ತಿಯನ್ನು ಧಾರೆ ಎರೆಯುತ್ತದೆ.
– ಎಚ್.ಕೆ. ಪಾಟೀಲ.
ಪ್ರವಾಸೋದ್ಯಮ ಸಚಿವರು.


Spread the love

LEAVE A REPLY

Please enter your comment!
Please enter your name here