ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹೊಲಿಗೆ ಕಲಿಕೆ ತರಬೇತಿಗೆ ಅಷ್ಟೇ ಸೀಮಿತ ಮಾಡಿಕೊಳ್ಳದೆ ಅದನ್ನು ವೃತ್ತಿಯಾಗಿ ಸ್ವೀಕರಿಸಬೇಕು ಎಂದು ಎಸ್.ಕೆ.ಡಿ.ಆರ್.ಡಿ.ಪಿ ಗದಗ ಜಿಲ್ಲಾ ನಿರ್ದೇಶಕ ಯೋಗೀಶ್ ಎ ಹೇಳಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳು ಉಚಿತವಾಗಿ ನಡೆದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹೊಲಿಗೆ ವೃತ್ತಿಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವವರಿಗೆ ಯಾವತ್ತಿಗೂ ವೃತ್ತಿ ಕೈಹಿಡಿಯುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಮಾತೃಶ್ರೀ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಬೇರೆ ಬೇರೆ ಸ್ವ-ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತಿದೆ. ಇವತ್ತು ಲಕ್ಷಾಂತರ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಸಹಭಾಗಿತ್ವದಲ್ಲಿ ರುಡ್ ಸೆಟ್ ಹಾಗೂ ಆರ್ ಸೆಟ್ ಎನ್ನುವ ತರಬೇತಿ ಸಂಸ್ಥೆಗಳಿದ್ದು, ಪ್ರತಿ ತಿಂಗಳು ಇಲ್ಲಿ ಉಚಿತ ಊಟ-ವಸತಿಯೊಂದಿಗೆ ತರಬೇತಿಯನ್ನು ಕೊಟ್ಟು ಸದಸ್ಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ.
ಈಗಾಗಲೇ ಹಲವಾರು ಮಹಿಳೆಯರು ಬೇರೆ ಬೇರೆ ಊರುಗಳ ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗ ನಡೆಸುತ್ತಿದ್ದಾರೆ. ಕಳೆದ ೧5 ವರ್ಷಗಳಿಂದ ಯಶಸ್ವಿಯಾಗಿ ಯೋಜನೆ ತಾಲೂಕಿನಲ್ಲಿ ಕಾರ್ಯಗತಗೊಂಡಿದೆ. ಹಣಕಾಸು ವಹಿವಾಟಿನ ಜೊತೆಗೆ ಸಮಾಜಮುಖಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ಮುನ್ನಡೆಯತ್ತಾ ಬಂದಿದೆ ಎಂದರು.
ಅತಿಥಿಯಾಗಿದ್ದ ರೋಣ ತಾಲೂಕಿನ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಮಹಿಳೆಯರು ಹೆಚ್ಚು ಉಳಿತಾಯ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಯೋಜನೆ ವತಿಯಿಂದ ಅಗರಬತ್ತಿ ತಯಾರಿಕೆ ತರಬೇತಿ ನೀಡಲಾಗುತ್ತಿದೆ. ಅದರ ತರಬೇತಿಯನ್ನು ತಾವು ಪಡೆದುಕೊಂಡು ಮನೆಯಲ್ಲಿ ಉತ್ತಮ ಗುಣಮಟ್ಟದ ಅಗರಬತ್ತಿ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಆದಾಯವನ್ನು ಪಡೆಯಬಹುದೆಂದು ವಿವರಿಸಿದರಲ್ಲದೆ, ಮಹಿಳೆಯರು ಸ್ವ-ಸಹಾಯ ಸಂಘದ ಸಾಮಾನ್ಯ ನಿಯಮ ಮತ್ತು ಪರಿಕಲ್ಪನೆಯನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಇನ್ನೋರ್ವ ಅತಿಥಿ ವಿಎಸ್‌ಎಸ್ ಬ್ಯಾಂಕಿನ ಅಧ್ಯಕ್ಷ ಶಿವಾನಾಗಪ್ಪ ದೊಡ್ಡಮೇಟಿ ಮಾತನಾಡಿ, ಧರ್ಮಸ್ಥಳ ಸಂಘದ ಪ್ರತಿಯೊಂದು ಕಾರ್ಯಕ್ರಮಗಳೂ ಉಪಯುಕ್ತವಾಗಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಿದ ೨೫ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಟೈಲರಿಂಗ್ ತರಬೇತಿ ನೀಡಿದ ಶಿಕ್ಷಕಿ ಈರಮ್ಮ ಕಡಗದ ಶುಭ ಹಾರೈಸಿದರು. ಹೊಲಿಗೆ ತರಬೇತಿ ಪಡೆದುಕೊಂಡ ಗುರುಬಸವ್ವ ಗೆದಗೇರಿ, ಸುಮಾ ಶ್ಯಾಶೆಟ್ಟಿ, ಜ್ಯೋತಿ ಸೋಮನಕಟ್ಟಿ, ಶಶಿಕಲಾ ಕರೇಕುಲದ ಅನಿಸಿಕೆ ಹಂಚಿಕೊಂಡರು.
ಗಣ್ಯ ವ್ಯಾಪಾರಸ್ಥ ಮುತ್ತಣ್ಣ ಅಕ್ಕಿಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ವೀರಪ್ಪ ವಾಲಿ, ಬಸವರಾಜ ಶ್ಯಾಶೆಟ್ಟಿ, ಸುವರ್ಣ ತಳವಾರ, ಪತ್ರಕರ್ತ ಸಂಗಮೇಶ ಮೆಣಸಗಿ, ಮುನಿಯಪ್ಪ ಪಲ್ಲೇದ, ಚನ್ನಪ್ಪ ಮಡಿವಾಳರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಮಠಪತಿ, ವಲಯ ಮೇಲ್ವಿಚಾರಕ ರಾಘವೇಂದ್ರ ಗುಡಿ, ವಿಎಲ್‌ಇ ಪೂಜಾ ಲಿಗಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಜನಾ ಅಜರತನವರ ಪ್ರಾರ್ಥಿಸಿದರು. ಸುಮಂಗಲಾ ಶ್ಯಾಶೆಟ್ಟಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ದೇವಕ್ಕ ಪಲ್ಲೇದ ನಿರೂಪಿಸಿದರು.