ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಭೌತಿಕ ಬದುಕಿಗೆ ಸಂಪತ್ತಿನೊಂದಿಗೆ ಶಿವಜ್ಞಾನದ ಅರಿವು ಮುಖ್ಯ. ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆಯಬೇಕು. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹಣ ಮತ್ತು ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ದೇಶ, ಸಂಸ್ಕೃತಿ ಮತ್ತು ಧರ್ಮದ ಬಗೆಗೆ ಚಿಂತಿಸಲಾರ. ಸಿರಿ ಸಂಪತ್ತು ಗಳಿಸಲು, ಉಳಿಸಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಮಾತ್ರ ಸಮಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವುದು ನೋವಿನ ಸಂಗತಿ.
ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯಾಧಾರಿತ ವಿಚಾರಗಳನ್ನು ಅನುಸರಿಸಿ ಬಾಳಬೇಕಾಗುತ್ತದೆ. ತನಗಾಗಿ ಬಯಸುವುದು ಜೀವಗುಣ. ಎಲ್ಲರಿಗಾಗಿ ಬಯಸುವುದು ದೇವಗುಣ. ಅಂಥ ದೇವಗುಣಗಳ ಅಕ್ಷಯ ನಿಧಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಎಂಬುದನ್ನು ಯಾರೂ ಮರೆಯಬಾರದೆಂದರು.
ಸಮಾರಂಭ ಉದ್ಘಾಟಿಸಿದ ಹುಬ್ಬಳ್ಳಿಯ ಡಾ. ಎಸ್.ಪಿ. ಬಳಿಗಾರ ಮಾತನಾಡಿ, ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ದೂರದೃಷ್ಟಿ ಮತ್ತು ವಿಶ್ವ ಬಂಧುತ್ವದ ಚಿಂತನೆಗಳು ನಮ್ಮೆಲ್ಲರ ಬಾಳಿಗೆ ದಾರಿದೀಪ. ಸಿದ್ಧಿ ಸಾಧನೆಯ ಮೇರು ಪರ್ವತದಂತಿದ್ದ ಜಗದ್ಗುರುಗಳು ಆಧ್ಯಾತ್ಮ ಜ್ಞಾನದ ಅರಿವು ಮೂಡಿಸಲು ಸದಾ ಶ್ರಮಿಸಿದ್ದನ್ನು ಮರೆಯಲಾಗದು. ಅವರು ತೋರಿದ ದಾರಿಯಲ್ಲಿ ನಡೆಯುವುದೇ ಅವರಿಗೆ ಅರ್ಪಿಸುವ ನಿಜವಾದ ಕೃತಜ್ಞತೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕರಾದ ಕುಸುಮಾವತಿ ಸಿ.ಶಿವಳ್ಳಿ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಮಹಿಳೆಯರು ಕೊಟ್ಟ ಕೊಡುಗೆ ಅಪಾರ. ಧರ್ಮದ ಆಚರಣೆಗೆ ಸತ್ಯ ಸಂಸ್ಕೃತಿ ಉಳಿಯಲು ಮಹಿಳೆಯರೇ ಕಾರಣರಾಗಿದ್ದಾರೆ. ಮಹಿಳೆ ಜಾಗೃತಗೊಂಡರೆ ಸಂಸ್ಕೃತಿ ಇನ್ನಷ್ಟು ಉಜ್ವಲಗೊಳ್ಳಲು ಸಾಧ್ಯವಾಗುವುದೆಂದರು.
ನೇತೃತ್ವ ವಹಿಸಿದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಆಧ್ಯಾತ್ಮ ಲೋಕದಲ್ಲಿ ಧ್ರುವ ನಕ್ಷತ್ರ. ಅವರ ಆದರ್ಶ ಜೀವನ, ಸಂದೇಶ ಭಕ್ತ ಸಂಕುಲಕ್ಕೆ ಆಶಾ ಕಿರಣ. ಅವರು ಸಂಕಲ್ಪಿಸಿದ ತ್ರಿಕೋಟಿ ಶಿವಲಿಂಗ ಪ್ರಾಣ ಪ್ರತಿಷ್ಠಾಪನೆಗೆ ಇದೀಗ ಕಾಲ ಕೂಡಿ ಬಂದಿದೆ ಎಂದು ಹರುಷ ವ್ಯಕ್ತಪಡಿಸಿದರು.
ಸಮ್ಮುಖ ವಹಿಸಿದ ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಮತ್ತು ಪರಂಪರೆ ಕುರಿತು ಉಪದೇಶಾಮೃತವನ್ನಿತ್ತರು. ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಕಲಾದಗಿಯ ಗಂಗಾಧರ ಶಿವಾಚಾರ್ಯರು ಲಕ್ಷ್ಮೇಶ್ವರದ ಮಳೆಮಲ್ಲೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮುಕ್ತಿ ಮಂದಿರ ಕ್ಷೇತ್ರದಲ್ಲಿ ಹಲವರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆ ಕಾರ್ಯವನ್ನು ಎಲ್ಲರೂ ಸೇರಿ ಪೂರ್ಣಗೊಳಿಸುವ ಸತ್ಯ ಸಂಕಲ್ಪ ಕೈಗೊಳ್ಳಬೇಕೆಂದರು.
ಸಮಾರಂಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ಗಂಗಣ್ಣ ಮಹಂತಶೆಟ್ರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಜನ ಸಮುದಾಯದಲ್ಲಿ ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ ಅತೃಪ್ತಿಗಳಿಗೆ ಮೂಲ ಕಾರಣ. ಹಣತೆ ತನಗಾಗಿ ಉರಿಯದೇ ಪರರಿಗೆ ಬೆಳಕು ನೀಡುವಂತೆ ಮಹಾತ್ಮರು ತಮಗಾಗಿ ಏನನ್ನೂ ಬಯಸದೇ ಪರ ಹಿತಕ್ಕಾಗಿ ಸದಾ ಶ್ರಮಿಸುತ್ತಾರೆ. ನೆರಳು ನೀಡುವ ಮರ, ಹರಿಯುವ ನೀರು, ಬೀಸುವ ಗಾಳಿ ಮತ್ತು ನಮ್ಮೆಲ್ಲರನ್ನು ಹೊತ್ತ ನೆಲ ಪರೋಪಕಾರವನ್ನು ಎತ್ತಿ ತೋರಿಸುತ್ತವೆ. ನದಿಯ ನೀರನ್ನು ಎಷ್ಟು ತುಂಬಿದರೂ ಹೇಗೆ ಕಡಿಮೆ ಆಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಪೂರ್ಣವಾಗದು. ಜಾತಿ ಮತ್ತು ಮತೀಯ ಮೌಢ್ಯ ಅಳಿದು, ಸ್ನೇಹ-ಸೌಜನ್ಯ ಉಳಿದು ಬೆಳೆಯಬೇಕು.
– ಡಾ. ವೀರಸೋಮೇಶ್ವರ ಜಗದ್ಗುರುಗಳು.
ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು.