HomeAgricultureಮರಳುಗಳ್ಳರಿಗೆ ಲಗಾಮು ಹಾಕುವವರಾರು?

ಮರಳುಗಳ್ಳರಿಗೆ ಲಗಾಮು ಹಾಕುವವರಾರು?

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ, ಖನಿಜ ಸಂಪತ್ತಿನಿಂದ ಸಮೃದ್ಧವಾದ ತಾಲೂಕಾಗಿದೆ. ಕೆಲವು ಬಂಡವಾಳಶಾಹಿಗಳು ತಾಲೂಕಿಗೆ ಲಗ್ಗೆಯಿಟ್ಟು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ, ಬಹುತೇಕ ಸರಕಾರಿ ಹಳ್ಳ-ಕೊಳ್ಳಗಳಲ್ಲಿ ಮತ್ತು ತುಂಗಭದ್ರಾ ನದಿ ಪಾತ್ರದ ಭಾಗಗಳಲ್ಲಿ ಹಗಲು-ರಾತ್ರಿ ಎನ್ನದೇ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರಾರು ಎಂಬ ಪ್ರಶ್ನೆಯೆದ್ದಿದೆ.

ಶಿರಹಟ್ಟಿ ತಾಲೂಕಿನ ಹೆಬ್ಬಾಳ ಮತ್ತು ಕನಕವಾಡ ಸರಕಾರಿ ಹಳ್ಳದಲ್ಲಿ ಯಂತ್ರೋಪಕರಣಗಳನ್ನು ಬಳಸಿ ಅಪಾರ ಪ್ರಮಾಣದಲ್ಲಿ ಮರಳನ್ನು ತೆಗೆಯುತ್ತಿರುವದರಿಂದ ಹಳ್ಳದಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿವೆ. ಹಳ್ಳಕ್ಕೆ ಹೊಂದಿಕೊಂಡ ಜಮೀನುಗಳ ರೈತರು ತಮ್ಮ ಜಮೀನುಗಳಿಗೆ ತೆರಳಲು ನಿತ್ಯವೂ ಹರಸಾಹಸ ಪಡುತ್ತಿದ್ದಾರೆ. ಇದನ್ನು ತಡೆಗಟ್ಟಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಿರಹಟ್ಟಿ ತಹಸೀಲ್ದಾರರಿಗೆ ಲಿಖಿತ ಮನವಿಯನ್ನೂ ಸಹ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಕೊಂಡಿಲ್ಲವೆಂದು ರೈತರು ಆರೋಪಿಸುತ್ತಿದ್ದಾರೆ.

ಅಕ್ರಮ ಮರಳು ಸಾಗಾಣಿಕೆದಾರರು ಅಧಿಕಾರಿಗಳೊಂದಿಗೆ ತಿಂಗಳ ಹಫ್ತಾ ಒಪ್ಪಂದ ಮಾಡಿಕೊಂಡು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಹೀಗಾಗಿ ಹಗಲು-ರಾತ್ರಿ ಎನ್ನದೇ ರಾಜಾರೋಷವಾಗಿ ಮರಳು ತುಂಬಿಕೊಂಡು ವಾಹನಗಳು ಓಡಾಡುತ್ತಿವೆ. ಇದರ ನಿಯಂತ್ರಣ ಕಷ್ಟಸಾಧ್ಯ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

transportation

ತಮ್ಮ ಕಾರ್ಯಕ್ಷಮತೆ ಮೂಲಕ ಜಿಲ್ಲೆಯಾದ್ಯಂತ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಪ್ರಥಮ ಬಾರಿಗೆ ಹೆಬ್ಬಾಳ ಗ್ರಾಮದಲ್ಲೇ ಗ್ರಾಮವಾಸ್ತವ್ಯವನ್ನು ಮಾಡಿದ್ದು ವಿಶೇಷ. ಆದ್ದರಿಂದ ಈ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಲು ಗಮನಹರಿಸಬೇಕೆಂದು ಈ ಭಾಗದ ಜನತೆ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ. ಚಂದ್ರು ಲಮಾಣಿ, ಸರಕಾರಿ ಹಳ್ಳ-ಕೊಳ್ಳಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಹಾಗೂ ಅಕ್ರಮ ಮರಳು ದಂಧೆ ನಡೆಸುವವರ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದಿದ್ದಾರೆ. ತಹಸೀಲ್ದಾರ ಅನಿಲ ಬಡಿಗೇರ, ಕಂದಾಯ ನಿರೀಕ್ಷಕ ಮತ್ತು ಗ್ರಾಮಲೆಕ್ಕಾಧಿಕಾರಿಗಳ ತಂಡ ರಚಿಸಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯಲು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳ ಗ್ರಾಮದ ರೈತರಾದ ಶಿದ್ಲಿಂಗಪ್ಪ ಮುಂಡವಾಡ, ವೀರಯ್ಯ ಮಠಪತಿ, ನಮ್ಮ ಜಮೀನುಗಳ ದಂಡೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವ ವಾಹನಗಳು ಸಾಗುತ್ತಿದ್ದು ಇದರಿಂದ ನಮ್ಮ ಜಮೀನಿನ ಒಡ್ಡುಗಳು ಒಡೆಯುತ್ತಿವೆ. ಬೆಳೆಗಳನ್ನು ರಕ್ಷಿಸಲು ಕಷ್ಟಸಾಧ್ಯವಾಗುತ್ತಿದೆ. ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಅಕ್ರಮ ಮರಳು ಸಾಗಾಣಿಕೆ ಬಂದ್ ಮಾಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!