ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಶಾಲೆಗಳಲ್ಲಿಯೂ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸರಕಾರಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಸರಕಾರಿ ಶಾಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುವದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 4ರಲ್ಲಿ ಮಂಗಳವಾರ ನಡೆದ ನೂತನ ಶೌಚಾಲಯ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗುವ ಉತ್ತಮ ವಾತಾವರಣ ಇರುವುದು ಅಗತ್ಯವಾಗಿದೆ. ಇದರಿಂದ ಮಕ್ಕಳ ಕಲಿಕೆಯಲ್ಲಿ ಸಮಗ್ರ ಬದಲಾವಣೆ ಕಾಣಬಹುದು. ಶಾಲೆಗಳಲ್ಲಿ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಶಾಲೆಯ ವಾತಾವರಣ ಮಕ್ಕಳ ಕಲಿಕೆಗೆ ಪೂರಕವಾಗಿರಬೇಕು. ಅಂದಾಗ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಎಲ್ಲಾ ರೀತಿಯ ಸಹಾಯ-ಸಹಕಾರ ನೀಡುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಅರ್. ಪಾಟೀಲ, ಹಾಲಿ ಸದಸ್ಯ ಬಸವರಾಜ ಓದುವವರು, ಪ್ರವೀಣ ಬೊಮಲೆ, ಗಂಗಾಧರ ಮೆಣಸಿನಕಾಯಿ, ಭೀಮಣ್ಣ ಯಂಗಾಡಿ, ಪ್ರವೀಣ ಬಾಳಿಕಾಯಿ, ಮುಖ್ಯೋಪಾಧ್ಯಾಯ ಬಿ.ಎಚ್. ಸಣ್ಣಮನಿ, ನಿಂಗಪ್ಪ ಬನ್ನಿ, ವಿಜಯ ಕುಂಬಾರ, ಮಂಜುನಾಥ ಉಮಚಗಿ, ಮಂಜುನಾಥ ಹೊಗೆಸೊಪ್ಪಿನ, ವಿಶಾಲ ಬಟಗುರ್ಕಿ, ಸಂತೋಷ ಜಾವೂರ, ರಮೇಶ ಹಾಳದೋಟದ, ಸಿಆರ್‌ಪಿ ಉಮೇಶ ನೇಕಾರ ಮುಂತಾದವರಿದ್ದರು.


