ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ಕೇವಲ 500 ರೂಪಾಯಿ ಕೂಲಿ ಹಣದ ಬಾಕಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣದ ಅಪರಾಧಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಂಜುನಾಥ ಚೆನ್ನಯ್ಯ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾರೆ.
ಶಿರಸಿ ತಾಲೂಕಿನ ಸೋಂದಾ ಸಮೀಪದ ಕಮಟಗೇರಿ ಗ್ರಾಮದ ರವೀಶ್ ಚೆನ್ನಯ್ಯ ತೋಟ ಮತ್ತು ಗದ್ದೆ ಕೆಲಸಗಳ ಗುತ್ತಿಗೆ ಪಡೆಯುವ ಶೇರುಗಾರರಾಗಿದ್ದರು. ಅದೇ ಗ್ರಾಮದ ಮಂಜುನಾಥ ಚೆನ್ನಯ್ಯ ಅವರ ಬಳಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕೂಲಿ ಹಣದ ಬಾಕಿ ವಿಚಾರವಾಗಿ ಇವರಿಬ್ಬರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುತ್ತಿದ್ದವು.
2025ರ ಆಗಸ್ಟ್ 8ರಂದು ಹಣದ ವಿಚಾರವಾಗಿ ಗಲಾಟೆ ಉಂಟಾದಾಗ, ರವೀಶ್ ಅವರು ಎರಡು ದಿನಗಳಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆಗಸ್ಟ್ 14ರಂದು ಮತ್ತೆ ಕೆಲಸಕ್ಕೆ ಕರೆದ ಸಂದರ್ಭದಲ್ಲೇ ಹಳೆಯ ಬಾಕಿ ಹಣ ನೀಡದಿದ್ದುದಕ್ಕೆ ಕೋಪಗೊಂಡ ಮಂಜುನಾಥ, ರಾತ್ರಿ ವೇಳೆ ಕಬ್ಬಿಣದ ಗುದ್ದಲಿಯಿಂದ ರವೀಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದ. ಪರಿಣಾಮವಾಗಿ ತೀವ್ರ ರಕ್ತಸ್ರಾವ ಉಂಟಾಗಿ ರವೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು.
ತನಿಖೆ ವೇಳೆ ಆರೋಪಿಯ ಹಿಂದಿನ ಅಪರಾಧ ಚರಿತ್ರೆಯೂ ಬೆಳಕಿಗೆ ಬಂದಿದೆ. ಮಂಜುನಾಥ ಈ ಹಿಂದೆ ತನ್ನ ಮಾವನನ್ನು ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಕ್ರಿಮಿನಲ್ ಪ್ರವೃತ್ತಿ ಬದಲಾಗಿಲ್ಲ ಎಂಬುದು ಈ ಘಟನೆಯಿಂದ ತಿಳಿದುಬಂದಿದೆ.
ಮೃತರ ಪತ್ನಿ ಚೇತನಾ ಚೆನ್ನಯ್ಯ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ ಮಹತ್ವದ ತೀರ್ಪು ನೀಡಿದ್ದಾರೆ.
ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆಯೊಂದಿಗೆ 25,000 ರೂಪಾಯಿ ದಂಡ ವಿಧಿಸಲಾಗಿದ್ದು, ಜೊತೆಗೆ ಮೃತರ ಪತ್ನಿಗೆ 50,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಕೇವಲ 500 ರೂಪಾಯಿ ವಿಚಾರವಾಗಿ ನಡೆದ ಈ ಹತ್ಯೆ ಪ್ರಕರಣಕ್ಕೆ ವಿಧಿಸಿದ ಕಠಿಣ ಶಿಕ್ಷೆ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ.



