ಗದಗ: ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಳಿಕ ಲಿಂಗಾಯತ ಸಮಾಜ ಒಗ್ಗೂಡುವಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆದ ಕಾನೂನು ಸಚಿವ ಹೆಚ್ಕೆ ಪಾಟೀಲ್, ನಿಮ್ಮ ಮನಸ್ಸಿಗೆ ಬಂದ ಹಾಗೇ ಲೆಕ್ಕ ಹಾಕಿದರೆ ನಡೆಯಲ್ಲ. ಲಿಂಗಾಯತ ಸಮುದಾಯದ ನಾಯಕರು ಯಾರೂ ಅಂತ ಪ್ರಶ್ನೆ ಮಾಡಿದರು.
ಗದಗನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವತ್ತು ಶಾಮನೂರ ಶಿವಶಂಕರಪ್ಪನವರು ಲಿಂಗಾಯತ ನಾಯಕರು. ಶಾಮನೂರ ಜಾಗತಿಕ ಅಧ್ಯಕ್ಷರು. ನಮ್ಮ ಪಾರ್ಟಿಯಲ್ಲಿ ಲಿಂಗಾಯತ ನಾಯಕರು ಇಲ್ವಾ? ಈಶ್ವರ ಖಂಡ್ರೆ, ಎಂ ಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ನಾಯಕರು ಅಲ್ವಾ? ಇವರ‌್ಯಾರು ಲಿಂಗಾಯತ ನಾಯಕರು ಕಾಣಲ್ವಾ ಎಂದರು.
ವಿಜಯೇಂದ್ರನ ಅಧ್ಯಕ್ಷ ಮಾಡುವ ಮೂಲಕ ಪ್ರಧಾನಿ ಮೋದಿ ಘರ್ಜನೆ ನಿಂತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಪರಿವಾರ ರಾಜಕೀಯ ಕುರಿತು ಮಾತನಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದ ಸಚಿವ ಪಾಟೀಲ, ಮೋದಿ ಕೂಡ ಅವಕಾಶವಾದಿ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಈಗಾಗಲೇ ಅವರ ಪಕ್ಷದಲ್ಲಿ ಅಸಮಾಧಾನ, ಅಪಸ್ವರ ಆರಂಭವಾಗಿದೆ ಎಂದರು.
ಬೆಲ್ಲದ, ಯತ್ನಾಳ, ಸಿ ಟಿ ರವಿ, ಹೇಗೆ ಮಾತನಾಡಿದ್ದಾರೆ ಎನ್ನುವುದನ್ನು ನೀವು ನೋಡಿದ್ದಿರಿ, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ, ಅಪಾಯ ಯಾವುದ ಆಗೋದಿಲ್ಲ ಎಂದರು.
ಬಿ. ಎಸ್ ಯಡಿಯೂರಪ್ಪ ಅವರು ಬೇರೆ, ಅವರ ಮಗ ಬೇರೆ ಎಂದ ಸಚಿವ ಪಾಟೀಲ, ಯಡಿಯೂರಪ್ಪ ಅವರಿಗೆ ಸುಮಾರು 50 ವರ್ಷಗಳ ಕಾಲ ಹೋರಾಟದ ಬದುಕು ಇದೆ. ಅವರು ಹೋರಾಟದ ಹಿನ್ನಲೆಯಲ್ಲಿ ನಾಯಕರಾಗಿ ಹೊರಹೊಮ್ಮಿದವರು ಎಂದರು.
ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಆಪಾದನೆ ಮಾಡ್ತಾ ಇದ್ದರು, ಈವಾಗ ಕುಟುಂಬ ರಾಜಕಾರಣದ ಕುರಿತು ಏನಂತ ಆಪಾದನೆ ಮಾಡ್ತಾರೆ ಎಂದು ಪ್ರಶ್ನಿಸಿದ ಸಚಿವ ಪಾಟೀಲ, ಬಿಜೆಪಿ ನೈತಿಕ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಬಿ.ಅಸೂಟಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಬರಕತ್ ಮುಲ್ಲಾ, ವಿನೋದ ಶಿದ್ಲಿಂಗ್, ಶಿವರಾಜ್ ಕೋಟಿ, ಮಹ್ಮದ ಶಾಲಗಾರ, ಸಯ್ಯದ್ ಖಾಲಿದ್ ಕೊಪ್ಪಳ, ಯೂಸುಫ್ ಡಂಬಳ, ಅನ್ವರ ಶಿರಹಟ್ಟಿ ಸೇರಿದಂತೆ ಅನೇಕರಿದ್ದರು.