HomeKarnataka Newsದೇಶಕ್ಕಾಗಿ ಬದುಕಿ, ದೇಶವನ್ನು ಕಟ್ಟುವ ಕೆಲಸ ಮಾಡಿ: ವಿದ್ಯಾರ್ಥಿಗಳಿಗೆ ಮಾಜಿ ಸಿಎಂ ಬೊಮ್ಮಾಯಿ ಕರೆ

ದೇಶಕ್ಕಾಗಿ ಬದುಕಿ, ದೇಶವನ್ನು ಕಟ್ಟುವ ಕೆಲಸ ಮಾಡಿ: ವಿದ್ಯಾರ್ಥಿಗಳಿಗೆ ಮಾಜಿ ಸಿಎಂ ಬೊಮ್ಮಾಯಿ ಕರೆ

For Dai;y Updates Join Our whatsapp Group

ಹಾವೇರಿ: “ಸ್ವಾತಂತ್ರ್ಯ ಬಂದ ನಂತರ ಜನಿಸಿದ ನಮಗೆಲ್ಲರಿಗೂ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಬೃಹತ್ ಜವಾಬ್ದಾರಿಯಿದೆ. ಈಗ ದೇಶಕ್ಕಾಗಿ ಪ್ರಾಣ ಕೊಡುವ ಕಾಲವಲ್ಲ, ದೇಶಕ್ಕಾಗಿ ಬದುಕಿ, ದೇಶವನ್ನು ಕಟ್ಟುವ ಕೆಲಸ ಮಾಡಬೇಕಿದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದ್ದಾರೆ.

ಯೂತ್ ಫಾರ್ ನೇಷನ್, ಹಾವೇರಿ ವತಿಯಿಂದ ಏರ್ಪಡಿಸಿದ ರಾಷ್ಟ್ರ ಪ್ರೇಮದ ಶ್ರಾವಣ ಸಂಭ್ರಮೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ​ಹಾವೇರಿಯ ಎಂ.ಜಿ. ರಸ್ತೆಯಲ್ಲಿ ಆಯೋಜಿಸಲಾಗಿದ್ದ ‘ತಿರಂಗಾ ಯಾತ್ರೆ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸುಮಾರು ಎರಡೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ಸಾಗಿ ‘ತಿರಂಗಾ ಯಾತ್ರೆ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಹಸ್ರಾರು ವಿದ್ಯಾರ್ಥಿಗಳ ದೇಶಭಕ್ತಿ ಹಾಗೂ ಉತ್ಸಾಹವನ್ನು ಬೊಮ್ಮಾಯಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

​ತ್ಯಾಗ-ಬಲಿದಾನಗಳ ಸ್ಮರಣೆ:

ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಸೇರಿದಂತೆ ದೇಶದ ಮುಕ್ತಿಗಾಗಿ ಪ್ರಾಣ-ಆಸ್ತಿಗಳನ್ನು ತ್ಯಾಗ ಮಾಡಿದ ಸಾವಿರಾರು ವೀರರ ಹೋರಾಟವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

​ಇಂದು ದೇಶಕ್ಕೆ ಬಲವಾದ ನಾಯಕತ್ವ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಸದೃಢವಾಗಿ ಬೆಳೆಯುತ್ತಿದೆ ಎಂದರು.
​ಕೋವಿಡ್ ಸಮಯದ ಸಾಧನೆ: ಜಗತ್ತಿನ ಮುಂದುವರಿದ ರಾಷ್ಟ್ರಗಳೇ ಕೊರೊನಾ ಮಹಾಮಾರಿಯಿಂದ ಕಂಗಾಲಾಗಿದ್ದಾಗ, ಭಾರತವು ಸ್ವದೇಶಿ ಲಸಿಕೆಯನ್ನು ಕಂಡುಹಿಡಿದು ದೇಶದ 130 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ನೀಡಿ, ವಿದೇಶಗಳಿಗೂ ಪೂರೈಸಿ ಮಾದರಿಯಾಯಿತು ಎಂದು ಸರ್ಕಾರದ ಸಾಧನೆಯನ್ನು ಎತ್ತಿಹಿಡಿದರು.

​ಬಲಿಷ್ಠ ನಾಯಕತ್ವ

​​”ಇಂದಿನ 21ನೇ ಶತಮಾನವು ಜ್ಞಾನ ಮತ್ತು ತಂತ್ರಜ್ಞಾನದ ಶತಮಾನವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅವು ನಮ್ಮನ್ನು ನಿಯಂತ್ರಿಸುವ ಮೊದಲು ನಾವೇ ತಂತ್ರಜ್ಞಾನವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಸವಾಲುಗಳನ್ನು ಜಾಣತನದಿಂದ ಎದುರಿಸುತ್ತಿದೆ. ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಸಿಂಧೂರ್‌ಗಳ ಮೂಲಕ ಬದ್ಧ ವೈರಿಗಳಿಗೆ ಸೂಕ್ತ ಉತ್ತರ ನೀಡಲಾಗಿದೆ. ಇರಾನ್-ಇಸ್ರೇಲ್ ಅಥವಾ ಇತರ ಜಾಗತಿಕ ಬಿಕ್ಕಟ್ಟುಗಳು ಎದುರಾದರೂ ದೇಶದಲ್ಲಿ ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಬಾಂಗ್ಲಾ ದೇಶದಂತಹ ನೆರೆಹೊರೆಯ ರಾಷ್ಟ್ರಗಳು ಇಂಧನಕ್ಕಾಗಿ ಭಾರತದತ್ತ ಮುಖ ಮಾಡುವ ವಾತಾವರಣ ನಿರ್ಮಾಣವಾಗಿದೆ.

​ಜೆನ್ ಝಿ’ ಮತ್ತು ಅಲ್ಫಾ ತಲೆಮಾರಿನ ಜವಾಬ್ದಾರಿ

ಇಂದಿನ ಜೆನ್ ಝಿ ಹಾಗೂ ಅಲ್ಫಾ ತಲೆಮಾರಿನ ಯುವಕರು ಜಾಗತಿಕ ಬದಲಾವಣೆಗಳ ಮುಂಚೂಣಿಯಲ್ಲಿದ್ದಾರೆ. ಬರುವ ಹೊಸ ಹೊಸ ಸವಾಲುಗಳನ್ನು ಎದುರಿಸುವ ಶಕ್ತಿ ಯುವಜನತೆಯಲ್ಲಿದೆ. ಪ್ರಸ್ತುತ ಭಾರತವು ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ 2047ರ ವೇಳೆಗೆ ಭಾರತವು ವಿಶ್ವದಲ್ಲೇ ಪ್ರಥಮ ಸ್ಥಾನಕ್ಕೆ ತಲುಪಬೇಕಿದೆ. ಈ ಕನಸು ನನಸಾಗಲು ಬರಿ ರಾಜಕಾರಣಿಗಳು ವೇದಿಕೆ ಮೇಲೆ ಕುಳಿತರೆ ಸಾಲದು; ಯುವಜನತೆ ಮತ್ತು ವಿದ್ಯಾರ್ಥಿಗಳು ಕಠಿಣ ಶ್ರಮ ವಹಿಸಬೇಕು ಎಂದರು.

​ಜ್ಞಾನವೇ ಅಂತಿಮ ಅಸ್ತ್ರ:

“ಹಿಂದಿನ ಕಾಲದಲ್ಲಿ ಸೈನ್ಯ ಅಥವಾ ಹಣವಿದ್ದವರು ಜಗತ್ತನ್ನು ಆಳುತ್ತಿದ್ದರು, ಆದರೆ ಇಂದು ಜ್ಞಾನವಿದ್ದವರು ಮಾತ್ರ ಜಗತ್ತನ್ನು ಮುನ್ನಡೆಸಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ವಿದ್ಯೆ ಕಲಿತು, ಜ್ಞಾನಾರ್ಜನೆ ಮಾಡಿ ತಮ್ಮ ಕ್ಷೇತ್ರದಲ್ಲಿ ಎಕ್ಸ್‌ಪರ್ಟ್ ಆಗಬೇಕು ಎಂದರು.
​‘ತಿರಂಗಾ ಯಾತ್ರೆ’ ಯಶಸ್ಸು: ದೇಶಪ್ರೇಮದ ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ‘ತಿರಂಗಾ ಯಾತ್ರೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿರುವುದಕ್ಕೆ ಬೊಮ್ಮಾಯಿ ಅವರು ಧನ್ಯವಾದ ಸಲ್ಲಿಸಿ, ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ವಿದ್ಯಾರ್ಥಿಗಳು ಯಾತ್ರೆಯಲ್ಲಿ ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img