ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ಭರವಸೆ ನೀಡಿ ಬಳಿಕ ಮದುವೆಗೆ ನಿರಾಕರಿಸಿ, ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಬಳಸಿಕೊಂಡು ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಐಶ್ವರ್ಯ ಎಂಬ ಯುವತಿ ಸಾವಿನ ಪ್ರಕರಣದಲ್ಲಿ ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿ ಸಂತೋಷ್ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಪ್ರೇಮ ಸಂಬಂಧ, ಮದುವೆ ವಿಚಾರವಾಗಿ ನಡೆದ ಗಲಾಟೆ ಹಾಗೂ ಬೆದರಿಕೆ ಆರೋಪಗಳ ಕುರಿತು ಹಲವು ವಿಚಾರಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.
ಪ್ರೀತಿಗೆ ಕುಟುಂಬದ ವಿರೋಧವಿತ್ತು
ಐಶ್ವರ್ಯ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರ ಪ್ರೀತಿಗೆ ಐಶ್ವರ್ಯ ಕುಟುಂಬಸ್ಥರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಸಂತೋಷ್ನನ್ನೇ ಮದುವೆಯಾಗುವುದಾಗಿ ಐಶ್ವರ್ಯ ಹಠ ಹಿಡಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬಳಿಕ ಮದುವೆಗೆ ಒಪ್ಪಿಗೆ ನೀಡಿದ್ದರು.
ಆದರೆ, ಮದುವೆಯಾಗಲು ಸಂತೋಷ್ ಮೂರು ವರ್ಷಗಳ ಕಾಲ ಸಮಯ ಕೇಳಿದ್ದ ಎನ್ನಲಾಗಿದೆ. ಮೂರು ವರ್ಷ ಕಳೆದರೂ ಮದುವೆಯಾಗದೆ ಐಶ್ವರ್ಯಳನ್ನು ಸತಾಯಿಸುತ್ತಿದ್ದ ಆರೋಪ ಆತನ ಮೇಲಿದೆ.
ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬೆದರಿಕೆ ಆರೋಪ
ಐಶ್ವರ್ಯಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಂತೋಷ್ ಚಿತ್ರೀಕರಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಬಳಿಕ ಮನೆಯವರು ಮದುವೆಗೆ ಒಪ್ಪುತ್ತಿಲ್ಲ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ರಾಜಿ ಮಾಡಿಕೊಂಡ ಬಳಿಕ ಮತ್ತೆ ಮದುವೆ ನಿಶ್ಚಯವಾಗಿತ್ತು. ಈ ಬಾರಿ ಕೂಡ ಸಂತೋಷ್ ಮದುವೆಗೆ ಆರು ತಿಂಗಳ ಕಾಲಾವಕಾಶ ಕೇಳಿದ್ದ ಎನ್ನಲಾಗಿದೆ. ಬಳಿಕ ಮತ್ತೆ ಮದುವೆಯಾಗುವುದಿಲ್ಲ ಎಂದು ಹೇಳಿ ಐಶ್ವರ್ಯ ಮನೆಗೆ ತೆರಳಿ ಗಲಾಟೆ ನಡೆಸಿದ್ದ ಆರೋಪ ಆತನ ಮೇಲಿದೆ.
ಈ ಘಟನೆಯ ಬಳಿಕ ಐಶ್ವರ್ಯ ಸಂತೋಷ್ನಿಂದ ದೂರವಾಗಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ಆದರೆ, ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುವುದು ಮತ್ತು ಪದೇ ಪದೇ ಭೇಟಿಯಾಗುವಂತೆ ಒತ್ತಡ ಹೇರುತ್ತಿದ್ದ ಆರೋಪವೂ ಇದೆ.
ಲಾಡ್ಜ್ನಲ್ಲಿ ನಡೆದ ಗಲಾಟೆ, ಯುವತಿಯ ಸಾವು
ಇಂಟರ್ವ್ಯೂ ಇದೆ ಎಂದು ಮನೆಯವರಿಗೆ ಹೇಳಿ ಐಶ್ವರ್ಯ ಸಂತೋಷ್ನನ್ನು ಭೇಟಿಯಾಗಲು ತೆರಳಿದ್ದಳು ಎನ್ನಲಾಗಿದೆ. ಕಳೆದ 19ರಂದು ಲಾಡ್ಜ್ನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸಂತೋಷ್ ಐಶ್ವರ್ಯಳನ್ನು ಲಾಡ್ಜ್ನ ಮೂರನೇ ಮಹಡಿಯ ಕಿಟಕಿಯಿಂದ ತಳ್ಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕರೆಂಟ್ ಕಂಬದ ಮೇಲೆ ಬಿದ್ದಿದ್ದ ಐಶ್ವರ್ಯ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಆರೋಪಿ ಸಂತೋಷ್ ಬಂಧನ
ಐಶ್ವರ್ಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಗಂಗಮ್ಮನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂತೋಷ್ನನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.










