ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಮುಖ ಗ್ರಾಮಗಳು ಹಾಗೂ ಹಳ್ಳಿಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ₹165 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ. ನೇಮಿರಾಜ ನಾಯ್ಕ ಹೇಳಿದರು.
ತಾಲೂಕಿನ ದಶಮಾಪುರ ಗ್ರಾಮದಲ್ಲಿ ಶುಕ್ರವಾರ ₹3 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ವರಲಹಳ್ಳಿಯಲ್ಲಿ ₹5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ರಸ್ತೆ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಜನರಿಗೆ ಕಾಮಗಾರಿಗಳಿಂದ ಅನುಕೂಲವಾಗಲಿದೆ. ಗ್ರಾಮೀಣ ಸಂಪರ್ಕ ರಸ್ತೆಗಳು ಸುಧಾರಿಸುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಸಾಗಿಸಲು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸಲು ಅನುಕೂಲವಾಗಲಿದೆ ಎಂದರು.
ಕ್ಷೇತ್ರದ ಬಂಡಿಹಳ್ಳಿ–ದಶಮಾಪುರ–ನಾಣ್ಯಪುರ ರಸ್ತೆ, ಬ್ಯಾಸಿಗಿದೇರಿಯಿಂದ ನಂದಿಪುರದವರೆಗೆ, ಬ್ಯಾಸಿಗೇರಿ ವೃತ್ತದಿಂದ ತಂಬ್ರಹಳ್ಳಿ ಮಾರ್ಗ ಹಾಗೂ ಬ್ಯಾಲಾಳ ರಸ್ತೆ–ರೈಲ್ವೆ ಗೇಟ್ನಿಂದ ಹಗರಿ–ಕ್ಯಾದಿಹಳ್ಳಿ ಮೂಲಕ ಚಿಲಗೋಡುವರೆಗಿನ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸೊನ್ನ–ಮೋರಿಗೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹4.5 ಕೋಟಿ ವೆಚ್ಚವಾಗಲಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.
ಚಿಂತರಪಳ್ಳಿ ರಸ್ತೆ ಅಭಿವೃದ್ಧಿಗೆ ₹4 ಕೋಟಿ ಮೀಸಲಿಡಲಾಗಿದ್ದು, ಮರಿಯಮ್ಮನಹಳ್ಳಿಯಿಂದ ಇಟಗಿ ವರೆಗೆ ಡಬಲ್ ಕೋಟಿಂಗ್ ತಾರ್ ರಸ್ತೆ ನಿರ್ಮಿಸಲಾಗುವುದು. ಓಬಳಾಪುರ, ಕೆಚ್ಚಿನಬಂಡಿ, ಹೊಸ ಆನಂದ ದೇವನಹಳ್ಳಿ ಹಾಗೂ ಹಲಗಾಪುರ ಗ್ರಾಮಗಳಲ್ಲಿ ತಲಾ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಉಪ್ಪಾರಗಟ್ಟೆ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ವರಲಹಳ್ಳಿ ಹಾಗೂ ಮಾಲವಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿ ಭಾಗದ ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.
ದಶಮಾಪುರದ ಮುಖಂಡರಾದ ಮಾಳಗಿ ಗಿರೀಶ್, ಚಂದ್ರಪ್ಪ, ಸಿದ್ದಬಸಪ್ಪ, ನಾಗರಾಜು, ಜಗದೀಶ್, ನೆರಗಲ್ ಬಸವರಾಜ್, ಹೋಟೆಲ್ ಸಿದ್ದರಾಜು, ವರಲಹಳ್ಳಿ ಮುಖಂಡರಾದ ಮೂರ್ತೆಪ್ಪ, ಸುರೇಶ್ ರೆಡ್ಡಿ, ಬಸವರಾಜ್, ನಾಗಪ್ಪ, ಕೊಟ್ರೇಶ್, ಬ್ಯಾಟಿ ನಾಗರಾಜ್ ಸೇರಿದಂತೆ ಲೋಕೋಪಯೋಗಿ ಇಲಾಖೆ, ಪಂಚಾಯಿತಿ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
2027ರೊಳಗಾಗಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿ ವ್ಯಾಪ್ತಿಯ ಕ್ಷೇತ್ರದಲ್ಲಿ ಶೇ.80ರಷ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಂತ ಹಂತವಾಗಿ ಎಲ್ಲ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
— ಕೆ. ನೇಮಿರಾಜ ನಾಯ್ಕ, ಶಾಸಕ



