ಬೆಂಗಳೂರು: ನಟ ದರ್ಶನ್ ಸಂಬಂಧಿತ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಜೈಲು ಸೇರಿದ್ದ ಮೂವರು ಆರೋಪಿಗಳಿಗೆ ಇದೀಗ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಸುಹಾಸ್, ವೈಭವ್ ಹಾಗೂ ಪುನೀತ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಸಂದೀಪ್ ಅವರಿಗೆ ಆರೋಪಿಗಳು ಬೆದರಿಕೆ ಹಾಕಿ, ನ್ಯಾಯಾಲಯದ ಮುಂದೆ ತಪ್ಪು ಮಾಹಿತಿ ನೀಡುವಂತೆ ಒತ್ತಡ ಹೇರಿದ್ದರು ಎಂಬ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಾಕ್ಷಿ ಸಂದೀಪ್ ನ್ಯಾಯಾಲಯದಲ್ಲಿ ಹೇಳಿಕೆ ನೀಡುವ ವೇಳೆ ತಮಗೆ ಬೆದರಿಕೆ ಹಾಕಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಗಳ ಮೊಬೈಲ್ಗಳನ್ನು ವಶಕ್ಕೆ ಪಡೆದು ಪರಿಶೀಲನೆಗಾಗಿ ಫಾರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿತ್ತು. ಪ್ರಕರಣದ ಹಿಂದೆ ಯಾರಾದರೂ ಪ್ರಭಾವಿಗಳ ಬೆಂಬಲ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆದಿತ್ತು.
ಜಾಮೀನು ಪಡೆದಿರುವ ಮೂವರು ಆರೋಪಿಗಳು ದರ್ಶನ್ ಅಭಿಮಾನಿಗಳಾಗಿದ್ದು, ತುಮಕೂರು ಜಿಲ್ಲೆಯವರು ಎನ್ನಲಾಗಿದೆ. ಇವರ ಪೈಕಿ ಪುನೀತ್ ಸಾಮಾಜಿಕ ಜಾಲತಾಣದ ‘ಡಿ-ಕಮ್ಯುನಿಟಿ’ ಫೇಸ್ಬುಕ್ ಪೇಜ್ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಪ್ರಕರಣದ ಸಾಕ್ಷಿಗಳ ವಿಚಾರಣೆಯನ್ನು ಕೆಳಹಂತದ ನ್ಯಾಯಾಲಯ ತ್ವರಿತವಾಗಿ ಕೈಗೆತ್ತಿಕೊಂಡಿದೆ.



