ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ರಾಜ್ಯಪಾಲ ಆರ್.ಎನ್. ರವಿ ವಜಾಗೊಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡಿದ್ದರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಹೈಡ್ರಾಮಾ ಮುಂದುವರಿಸಿದ್ದರು.
ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದರೂ, “ಟಿಎಂಸಿ ಸೋತಿಲ್ಲ, ಚುನಾವಣಾ ಆಯೋಗದ ಕಾರಣದಿಂದ ಬಿಜೆಪಿ ಗೆದ್ದಿದೆ” ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, “ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ” ಎಂದು ಸವಾಲು ಹಾಕಿದ್ದರು.
ಭಾರತ ಸಂವಿಧಾನದ 172ನೇ ವಿಧಿಯ ಪ್ರಕಾರ, ವಿಧಾನಸಭೆಯ ಮೊದಲ ಸಭೆಯಿಂದ ಐದು ವರ್ಷ ಪೂರ್ಣಗೊಂಡ ಬಳಿಕ ಸಭೆ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಅದರಂತೆ 2021ರಲ್ಲಿ ರಚನೆಯಾಗಿದ್ದ 17ನೇ ವಿಧಾನಸಭೆಯ ಅವಧಿ ಮೇ 07ರಂದು ಅಂತ್ಯಗೊಂಡಿದೆ.
ಈ ಹಿನ್ನೆಲೆ ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 164(1)ನೇ ವಿಧಿಯಡಿ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿ ವಿಧಾನಸಭೆ ವಿಸರ್ಜನೆಗೆ ಆದೇಶಿಸಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ 294 ಶಾಸಕರ ಸದಸ್ಯತ್ವವೂ ರದ್ದಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದ್ದು, ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ. ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸುಮಾರು 15 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ ಎನ್ನಲಾಗಿದೆ.
ಇದೀಗ ರಾಜ್ಯಪಾಲರು ಬಿಜೆಪಿ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಸಾಧ್ಯತೆ ಇದ್ದು, ಮೇ 09ರಂದು ಹೊಸ ಸರ್ಕಾರ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.



