HomeGadag Newsಗಣೇಶೋತ್ಸವದಲ್ಲಿ ಡಿಜೆ ಕಡ್ಡಾಯ ನಿಷೇಧ: ಎಸ್‌ಪಿ ಜಾಹ್ನವಿ

ಗಣೇಶೋತ್ಸವದಲ್ಲಿ ಡಿಜೆ ಕಡ್ಡಾಯ ನಿಷೇಧ: ಎಸ್‌ಪಿ ಜಾಹ್ನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಗಣೇಶ ಚತುರ್ಥಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಸಮಾಜದಲ್ಲಿ ಶಾಂತಿ ಭಂಗವಾಗುವ ಸಾಧ್ಯತೆಗಳಿದ್ದು, ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಾಹ್ನವಿ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಗಣೇಶೋತ್ಸವದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲಾದ್ಯಂತ ಯಾವುದೇ ರೀತಿಯ ಡಿಜೆ ಬಳಕೆಗೆ ಅವಕಾಶವಿರುವುದಿಲ್ಲ. ಹೀಗಾಗಿ ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರು ಅತ್ಯಂತ ಜವಾಬ್ದಾರಿಯಿಂದ ಹಬ್ಬವನ್ನು ಆಚರಿಸಬೇಕು ಎಂದು ಸೂಚಿಸಿದರು.

ಗಣೇಶೋತ್ಸವ ಆಯೋಜಕರು ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿರುತ್ತದೆ. ಸಾರ್ವಜನಿಕರ ತುರ್ತು ಸೇವೆಗಾಗಿ 112 ಸಹ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಮುಖಂಡ ಮುಟುಗನಹಳ್ಳಿ ಕೊಟ್ರೇಶ ಮಾತನಾಡಿ, ನಾಗರಿಕರು ಹಾಗೂ ಯುವಕರು ಸಡಗರ-ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಪತ್ರಕರ್ತ ಹುಳ್ಳಿ ಪ್ರಕಾಶ್ ಮಾತನಾಡಿ, ಗಣೇಶೋತ್ಸವ ಸಂದರ್ಭದಲ್ಲಿ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದರು. ‘ದಿ ಹಂಪಿ ವರ್ಲ್ಡ್’ ದಿನಪತ್ರಿಕೆ ಸಂಪಾದಕ ಎಂ. ಶಿವಮೂರ್ತಿ ಮಾತನಾಡಿ, ಭಾರತ ಹಲವು ಧರ್ಮ, ಜಾತಿ, ಆಚಾರ-ವಿಚಾರಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, ‘ವಿವಿಧತೆಯಲ್ಲಿ ಏಕತೆ’ಯನ್ನು ಬಿಂಬಿಸುವ ದೇಶವಾಗಿದೆ. ಸಿದ್ಧಿವಿನಾಯಕನ ಹಬ್ಬವನ್ನು ಭಕ್ತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಹೇಳಿದರು.

ಟಿವಿ ವಾಹಿನಿಯ ಸತೀಶ್ ಪಾಟೀಲ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಅಬಕಾರಿ ಇಲಾಖೆ ಹಾಡುಹಗಲೇ ನಡೆಯುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಪುರಸಭೆ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ, ಕಾಂಗ್ರೆಸ್ ಮುಖಂಡರಾದ ಸಿಖಂದರ್ ಖಾನ್, ಪುರಸಭೆ ಮಾಜಿ ಅಧ್ಯಕ್ಷ ಎಂ. ಮರಿರಾಮಪ್ಪ, ಸೆರೆಗಾರ ಹುಚ್ಚಪ್ಪ, ವಕೀಲರ ಸಂಘದ ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಸಮಾಜ ಸೇವಕ ಗದ್ದಿಕೇರಿ ನಾಗಭೂಷಣ ಸ್ವಾಮಿ, ಸರ್ದಾರ್ ಯಮನೂರಪ್ಪ ಸೇರಿದಂತೆ ಹಲವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮಲ್ಲೇಶನಾಯ್ಕ ದೊಡ್ಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ, ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹೇಮರೆಡ್ಡಿ, ಅಬಕಾರಿ ಇಲಾಖೆಯ ಮಮತಾ, ಕೂಡ್ಲಿಗಿ ಹಾಗೂ ತಂಬ್ರಹಳ್ಳಿ ಭಾಗದ ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು, ಡೆಪ್ಯೂಟಿ ತಹಶೀಲ್ದಾರ್ ಶಿವಕುಮಾರಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಪಿಐ ವಿಕಾಸ್ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಿನ ವಿವಿಧ ಭಾಗಗಳಿಂದ 500ಕ್ಕೂ ಅಧಿಕ ಜನರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶಾಂತಿಸಭೆಯಲ್ಲಿ ಪಾಲ್ಗೊಂಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img