ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯ ವಿಚಾರ: ತಡೆಯಾಜ್ಞೆ ಪ್ರಶ್ನಿಸಿದ್ದ ಸರ್ಕಾರದ ಅರ್ಜಿ ವಜಾ

0
Spread the love

ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ–ಸಂಸ್ಥೆಗಳ ರ್ಯಾಲಿ ಹಾಗೂ ಸಭೆಗಳನ್ನು ನಡೆಸಲು ಅನುಮತಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಸುತ್ತೋಲೆಗೆ ತಡೆಯಾಜ್ಞೆ ನೀಡಿದ್ದ ಆದೇಶವನ್ನು ರದ್ದುಗೊಳಿಸಲು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನಿರಾಕರಿಸಿದೆ.

Advertisement

ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಗೀತಾ ಕೆ.ಬಿ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ನೀಡಿದೆ. ಜೊತೆಗೆ, ತಡೆಯಾಜ್ಞೆ ತೆರವುಗೊಳಿಸುವ ಕುರಿತು ಸರ್ಕಾರ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿದೆ.

ಹಿಂದಿನ ವಿಚಾರಣೆಯಲ್ಲಿ, ಸರ್ಕಾರದ ಪರ ವಕೀಲರು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯಗೊಳಿಸಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಗೆ ಇದು ಅಗತ್ಯ ಕ್ರಮವಾಗಿದೆ. ಈ ಸುತ್ತೋಲೆ ಯಾವುದೇ ದುರುದ್ದೇಶದಿಂದ ಮಾಡಲ್ಪಟ್ಟಿಲ್ಲ ಎಂದು ವಾದಿಸಿದ್ದರು.

ಪೀಠ ಈ ವೇಳೆ “ಹತ್ತು ಜನರು ಸೇರಿದರು ಎಂದರೆ ಅನುಮತಿ ಅಗತ್ಯವೇ? ಪಾರ್ಕ್‌ಗಳಲ್ಲಿ ಕೆಲವರು ಸೇರಿ ಮಾತನಾಡಿದರೂ ಅನುಮತಿ ಬೇಕಾ?” ಎಂದು ಪ್ರಶ್ನಿಸಿತ್ತು.

ಇದಕ್ಕೆ ಪ್ರತಿಯಾಗಿ ವಕೀಲರು “ಸರ್ಕಾರಿ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳು ಜನರ ಓಡಾಟಕ್ಕೆ. ಖಾಸಗಿ ಕಾರ್ಯಕ್ರಮಗಳಿಗೆ ಬೇರೆ ಸ್ಥಳ ಬಾಡಿಗೆ ಪಡೆಯಬಹುದು. ಸಾರ್ವಜನಿಕ ಆಸ್ತಿಯ ಬಳಕೆಯಲ್ಲಿ ನಿಯಂತ್ರಣ ಅಗತ್ಯ” ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ವಿರೋಧವಾಗಿ ಅರ್ಜಿದಾರರ ಪರ ವಕೀಲರು, ಸರ್ಕಾರದ ಆದೇಶ ಸಂವಿಧಾನಬಾಹಿರ. ಸಾರ್ವಜನಿಕ ಸ್ಥಳಗಳು ಜನರ ಹಕ್ಕಿನ ಭಾಗ. ಅವುಗಳ ಬಳಕೆಗೆ ನಿರ್ಬಂಧ ಹೇರಿದರೆ ಅದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದ ಮಂಡಿಸಿದರು.


Spread the love

LEAVE A REPLY

Please enter your comment!
Please enter your name here