ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಹುಲಕೋಟಿ ಗ್ರಾಮದ ಪ್ರಸಿದ್ಧ ಶಾಯರಿ ಕವಿ ಮರುಳಸಿದ್ದಪ್ಪ ದೊಡ್ಡಮನಿ ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಬುದ್ಧ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವಿಗೋಷ್ಠಿಯಲ್ಲಿ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪಂಚ ಕಾವ್ಯದೌತಣ ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮವನ್ನು ಕವಿ ಡಾ. ಸಿ.ಪಿ. ಕೃಷ್ಣಕುಮಾರ ಉದ್ಘಾಟಿಸಿ ಮಾತನಾಡಿ, ಕವಿ ನಿಜವಾಗಿಯೂ ಅಜರಾಮರ. ಅವನಿಗೆ ಸಾವು ಬರಬಹುದು. ಆದರೆ, ಅವನ ಕಾವ್ಯಕ್ಕೆ ಸಾವೆಂಬುದಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಕವಿ ಮರುಳಸಿದ್ದಪ್ಪ ದೊಡ್ಡಮನಿ ಇವರು ಜೀವಪರವಾದ ಕಾಳಜಿ ಇರುವ, ಮನುಷ್ಯ ಪ್ರೀತಿ, ನೋವಿಗೆ ಸ್ಪಂದಿಸುವ ಕಾವ್ಯ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು. ವೇದಿಕೆಯ ಮೇಲೆ ಅಪರ ಜಿಲ್ಲಾಧಿಕಾರಿ ಡಾ. ಕೆ. ಶಿವರಾಜ್, ಪ್ರೊ. ಎನ್.ಕೆ. ಲೋಲಾಕ್ಷಿ ಮುಂತಾದವರು ಉಪಸ್ಥಿತರಿದ್ದರು.