ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್ ಲೇಔಟ್‌ನ ‘ಸಿ-9’ ಸರ್ವಿಸ್ ವಿಲ್ಲಾದಲ್ಲಿ ನಡೆಯುತ್ತಿದ್ದ ಭರ್ಜರಿ ರೇವ್ ಪಾರ್ಟಿ ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡೀ ರಾತ್ರಿ ನಡೆಯುತ್ತಿದ್ದ ಪಾರ್ಟಿಯನ್ನು ಪತ್ತೆಹಚ್ಚಿದ್ದಾರೆ. ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಐಪಿಎಸ್ ಲೇಔಟ್ ಸುರಕ್ಷಿತ ಸ್ಥಳ ಎಂದು ಭಾವಿಸಿದ್ದ ಆಯೋಜಕರು, ‘ಅಮಿಗೋಸ್’ ಆ್ಯಪ್ ಮೂಲಕ ಯುವಕ-ಯುವತಿಯರನ್ನು ಪಾರ್ಟಿಗೆ ಆಹ್ವಾನಿಸಿದ್ದರು ಎನ್ನಲಾಗಿದೆ.
ಪ್ರವೇಶ ಶುಲ್ಕ ಪಡೆದು ಪಾರ್ಟಿ ಆಯೋಜನೆ:
ಪಾರ್ಟಿಗೆ ಆಗಮಿಸುವ ಯುವಕರಿಂದ ₹1,099 ಹಾಗೂ ಯುವತಿಯರಿಂದ ₹499 ಪ್ರವೇಶ ಶುಲ್ಕ ವಸೂಲಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ದಿನಕ್ಕೆ ₹20 ಸಾವಿರ ಬಾಡಿಗೆ ನೀಡಿ ‘ರೆವ್ ಕೀ ಹಾಸ್ಪಿಟಾಲಿಟಿ’ ವಿಲ್ಲಾವನ್ನು ಬುಕ್ ಮಾಡಲಾಗಿತ್ತು ಎನ್ನಲಾಗಿದೆ.
ವಿಲ್ಲಾದಲ್ಲಿ ಇಡೀ ರಾತ್ರಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಮೋಜು-ಮಸ್ತಿ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ದಾಳಿ: ಮೂವರು ಬಂಧನ:
ದಾಳಿ ವೇಳೆ ಸ್ಥಳದಲ್ಲಿದ್ದ ಯುವತಿಯರನ್ನು ಪೊಲೀಸರು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಅಲ್ಲದೇ ನಿಷೇಧಿತ ಹುಕ್ಕಾ, ಇ-ಸಿಗರೇಟ್‌ಗಳು ಹಾಗೂ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಆರೋಪದಡಿ ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಎಂಬ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇನ್ನು, ನಿಯಮ ಉಲ್ಲಂಘಿಸಿ ವಿಲ್ಲಾವನ್ನು ಪಾರ್ಟಿಗೆ ನೀಡಿದ ಆರೋಪದಡಿ ಮನೆ ಮಾಲೀಕರ ವಿರುದ್ಧವೂ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



