ವಿಜಯಸಾಕ್ಷಿ ಸುದ್ದಿ, ಗದಗ: ಗುರುಪೂರ್ಣಿಮೆ ಅಂಗವಾಗಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಲಯನ್ ಲೇಡೀಸ್ ಕ್ಲಬ್ ಹಾಗೂ ಧಾರವಾಡದ ಗಂಧ ಪಲ್ಲವಿ ಫಾರ್ಮ್ಸ್ ಸಂಯುಕ್ತ ಆಶ್ರಯದಲ್ಲಿ ನಗರದ ಐತಿಹಾಸಿಕ ವೀರನಾರಾಯಣ ಹಾಗೂ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ‘ಹಸಿರು ಗದಗ’ ಅಭಿಯಾನಕ್ಕೆ ಮತ್ತಷ್ಟು ಚೈತನ್ಯ ತುಂಬಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಿಂಗರಾಜ ತೋಟದ, ಖಜಾಂಚಿ ರೇಣುಕಪ್ರಸಾದ ಶಿಗ್ಲಿಮಠ, ರಾಜಣ್ಣ ಮಲ್ಲಾಡದ, ದತ್ತು ಬೇವಿನಕಟ್ಟಿ, ಶ್ಯಾಮ್ ಮಿಸ್ಕಿನ್, ಸಂತೋಷ ಕಬಾಡರ, ಶಿವಪ್ರಭು ನೀಲಗುಂದ, ಪ್ರಕಾಶ ರಾಯ್ಕರ್, ಸಂತೋಷ ಕುರ್ಡೆಕರ, ದೇವಿದಾಸ ವಜ್ರೇಶ್ವರಿ ಸೇರಿದಂತೆ ಸದಸ್ಯರು ಹಾಗೂ ಲಯನ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಅಮೃತಾ ವಾರಕರ, ಕಾರ್ಯದರ್ಶಿ ಅಪರ್ಣಾ ತೋಟದ, ಖಜಾಂಚಿ ಪ್ರಿಯಾ ಶಿಗ್ಲಿಮಠ, ಪ್ರತಿಭಾ ಬೇವಿನಕಟ್ಟಿ, ಅಶ್ವಿನಿ ನೀಲಗುಂದ ಸೇರಿದಂತೆ ಅನೇಕರು ಪಾಲ್ಗೊಂಡು ಸಸಿ ನೆಟ್ಟರು.
ಈಗಾಗಲೇ ಗದುಗಿನ ವೀರಶೈವ ರುದ್ರಭೂಮಿ ಹಾಗೂ ಲಕ್ಕುಂಡಿ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ಕೈಗೊಂಡಿರುವ ಸಂಘಟಕರು, “ಜಿಲ್ಲೆಯ ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿ ಕನಿಷ್ಠ ಎರಡು ಗಿಡ” ನೆಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಅಗತ್ಯವಿರುವ ಸಸಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, ಪೆಟ್ರೋಲ್ ಬಂಕ್ ಮಾಲೀಕರು ಸ್ಥಳಾವಕಾಶ ಕಲ್ಪಿಸಿದರೆ ಗಿಡ ನೆಡುವುದು, ನೀರುಣಿಸುವುದು, ಸ್ವಚ್ಛತೆ ಹಾಗೂ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಗಂಧ ಪಲ್ಲವಿ ಫಾರ್ಮ್ಸ್‌ನ ಸ್ವಯಂಸೇವಕರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರತಿ ಸಸಿಯ ಉಸ್ತುವಾರಿಗೆ ಪ್ರತ್ಯೇಕ ಸ್ವಯಂಸೇವಕರನ್ನು ನೇಮಿಸಲಾಗುವುದು. ಆಸಕ್ತ ಸ್ವಯಂಸೇವಕರು 9481234602 ಸಂಖ್ಯೆಗೆ ಸಂಪರ್ಕಿಸಬಹುದಾಗಿದ್ದು, ಅಗತ್ಯ ವೆಚ್ಚವನ್ನೂ ಭರಿಸಲಾಗುವುದು ಎಂದು ಗಂಧ ಪಲ್ಲವಿ ಫಾರ್ಮ್ಸ್ ಸಂಘಟಕರಾದ ಸುಧನ್ವ ಅವಧಾನಿ ಹಾಗೂ ಈರಪ್ಪ ತಟ್ಟಿಮನಿ ತಿಳಿಸಿದರು.
ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು, ಯುವಕರು, ಮಹಿಳಾ ಮಂಡಳಿಗಳು, ಸಾಮಾಜಿಕ ಸಂಘಟನೆಗಳು ಹಾಗೂ ಶಾಲಾ-ಕಾಲೇಜುಗಳು ತಮ್ಮ ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟು ಹಸಿರು ಗದಗ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
“ಒಂದು ಗಿಡ ನೆಡುವುದು ಎಂದರೆ ಕೇವಲ ಮರ ಬೆಳೆಸುವುದಲ್ಲ, ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಆರೋಗ್ಯಕರ ಪರಿಸರವನ್ನು ಉಡುಗೊರೆಯಾಗಿ ನೀಡಿದಂತೆಯೇ. ಹಸಿರು ಗದಗ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು.”
– ಸುಧನ್ವ ಅವಧಾನಿ, ಗಂಧ ಪಲ್ಲವಿ ಫಾರ್ಮ್ಸ್ ಸಂಘಟಕರು



