ವಿಜಯಸಾಕ್ಷಿ ಸುದ್ದಿ, ಗದಗ : ಶಾಲಾ ಸಿದ್ಧತಾ ಕೇಂದ್ರದಲ್ಲಿ ಅಂಗವಿಕಲ ಮಕ್ಕಳಿಗೆ ನ್ಯೂನತೆಯ ಅನುಸಾರ ತರಬೇತಿ ನೀಡಲಾಗುತ್ತಿದ್ದು, ಎಸ್‌ಆರ್‌ಪಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಿ ಅದರ ಪ್ರಯೋಜನ ಪಡೆಯಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅವರು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಬೆಂಗಳೂರಿನ ಪೋರ್ಥ್ವೇ ಪೌಂಡೇಶನ್ ನನಗೂ ಶಾಲೆ ಸಂಸ್ಥೆಯ ಸಹಯೋಗದಲ್ಲಿ ಗದಗ ಶಹರ ವಲಯದ ವಿಶೇಷ ಚೇತನ ಮಕ್ಕಳ ಪಾಲಕರ ಸಭೆಯಲ್ಲಿ ಮಾತನಾಡಿದರು.
ಬಾಲ್ಯ ಎಂಬುದು ಆಟ-ಪಾಠಗಳ ಸಂಗಮ. ಈ ಮಕ್ಕಳು ಆಟ-ಪಾಠದಿಂದ ವಂಚಿತರಾಗುತ್ತಿದ್ದು, ಪಾಲಕರು ಇವರ ಆರೋಗ್ಯ ಜಾಗೃತಿಯತ್ತ ಹೆಚ್ಚು ಗಮನ ಹರಿಸಿ ಅವರಲ್ಲಿ ಸ್ಪೂರ್ತಿ ತುಂಬಿದರೆ ಅವರೂ ಸಾಧನೆ ಮಾಡಬಲ್ಲರು ಎಂದರು.
ಪೋರ್ಥ್ವೇ ಗದಗ ಸಂಚಾಲಕ ಬಸವರಾಜ ಮ್ಯಾಗೇರಿ ಮಾತನಾಡಿ, ವಿಶೇಷ ಮಕ್ಕಳು ಸಾಮಾನ್ಯ ಮಕ್ಕಳಂತೆ ಆಗಬಲ್ಲರು. ಪಾಲಕರ ಶ್ರಮ ಇದರಲ್ಲಿ ಬಹಳಷ್ಟು ಇದೆ. ಪಾಲಕರು ಭರವಸೆಯೊಂದಿಗೆ ಕಾರ್ಯ ನಿರ್ವಹಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಬಾಲ್ಯದಲ್ಲಿಯೇ ಇಂತಹ ಮಕ್ಕಳಿಗೆ ಸರಿಯಾದ ಜೀವನ ಕ್ರಮ ತಿಳಿಸಿಕೊಟ್ಟಲ್ಲಿ ಮುಂದೆ ಅವರು ಶೈಕ್ಷಣಿಕವಾಗಿಯೂ ಅಭಿವೃದ್ಧಿ ಹೊಂದಿ ಸಾಧನೆಯ ಮೆಟ್ಟಿಲೇರುವರು ಎಂದರು.
ಪೋರ್ಟ್ವೇದಿಂದ ಶಾಲಾ ಸಿದ್ಧತಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಟೀಶರ್ಟ್-ಪ್ಯಾಂಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಕರು, ಮಕ್ಕಳು ಪಾಲ್ಗೊಂಡಿದ್ದರು. ಎಸ್.ಸಿ. ಚಳಗೇರಿ ಸ್ವಾಗತಿಸಿ ವಂದಿಸಿದರು.