HomeKarnataka Newsಗುಳೆ ಹೋಗೋದು ಹಿಂದಿನಿಂದಲೂ ಇದೆ, ಅದನ್ನೇ ವಿವಾದ ಮಾಡಿದ್ದೇಕೆ? ಜಿ. ಪರಮೇಶ್ವರ್

ಗುಳೆ ಹೋಗೋದು ಹಿಂದಿನಿಂದಲೂ ಇದೆ, ಅದನ್ನೇ ವಿವಾದ ಮಾಡಿದ್ದೇಕೆ? ಜಿ. ಪರಮೇಶ್ವರ್

ಬೆಂಗಳೂರು: ಜನರು ಹಿಂದಿನಿಂದಲೂ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದರು. ಅದನ್ನೇ ನಾನು ಹೇಳಿದ್ದೇನೆ, ಅದನ್ನೇ ವಿವಾದ ಮಾಡಿದರೆ ಹೇಗೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಗುಳೆ ಹೋಗುವುದು ಸಾಂಪ್ರದಾಯಿಕ ಪ್ರಕ್ರಿಯೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. “ಪ್ರತಿ ವರ್ಷ ಜನರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಹೋಗುತ್ತಾರೆ. ತಾಂಡಾಗಳ ಜನರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಗುತ್ತಿಗೆ ಮಾಡಿಕೊಳ್ಳುತ್ತಾರೆ. ಗುತ್ತಿಗೆ ಅವಧಿ ಮುಗಿದ ಬಳಿಕ ವಾಪಸ್ ಬರುತ್ತಾರೆ. ಜನರು ಹಿಂದಿನಿಂದಲೂ ಗುಳೆ ಹೋಗುತ್ತಿದ್ದರು. ಅದನ್ನೇ ಹೇಳಿದ್ದೇನೆ. ಆದರೆ ಅದನ್ನೇ ವಿವಾದ ಮಾಡಲಾಗಿದೆ” ಎಂದು ಹೇಳಿದರು.

217 ತಾಲೂಕುಗಳು ಬರಪೀಡಿತ ಎಂದು ಘೋಷಣೆ

ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಸರ್ವಪಕ್ಷದ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಈವರೆಗೆ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ಉಳಿದ 23 ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದೆ. ಈ ಪೈಕಿ ಇನ್ನೂ 8ರಿಂದ 10 ತಾಲೂಕುಗಳು ಬರದ ಮಾನದಂಡಗಳ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಪರಿಶೀಲನಾ ವರದಿ ಬಂದ ಬಳಿಕ ಅಂತಿಮ ಮನವಿ ಪತ್ರವನ್ನು (ಮೆಮೋರಾಂಡಮ್‌) ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷದ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಲು ಉದ್ದೇಶಿಸಿದ್ದಾರೆ. ಆದರೆ, ಬಿಜೆಪಿಯವರು ನಿಯೋಗದೊಂದಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೊಮ್ಮೆ ಅವರನ್ನು ಆಹ್ವಾನಿಸಲಾಗುವುದು. ಅವರು ಬರದಿದ್ದರೆ ಸರ್ಕಾರವೇ ಕೇಂದ್ರಕ್ಕೆ ತೆರಳಿ ಪರಿಶೀಲನಾ ವರದಿಯೊಂದಿಗೆ ಮನವಿ ಸಲ್ಲಿಸಲಿದೆ. ಇಲ್ಲಿಂದಲೇ ಮನವಿ ಕಳುಹಿಸುವ ಬದಲು ಖುದ್ದಾಗಿ ತೆರಳಿ ವರದಿ ಸಮೇತ ಮನವಿ ಸಲ್ಲಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಸಿಎಂ ಮೇಲಿನ ಸ್ಟಿಂಗ್ ಆಪರೇಷನ್ ಯತ್ನದ ಬಗ್ಗೆ ಪ್ರತಿಕ್ರಿಯೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಿದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಮುಖ್ಯಮಂತ್ರಿಗಳ ಬಳಿ ಗುಪ್ತಚರ ವ್ಯವಸ್ಥೆ ಇದೆ. ಅವರಿಗೆ ಮಾಹಿತಿ ಬಂದಿರಬಹುದು. ಆದರೆ, ಯಾರು ಸ್ಟಿಂಗ್ ಆಪರೇಷನ್ ಮಾಡಲು ಪ್ರಯತ್ನಿಸಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದರು.

“ಯಾವ ಸಮಸ್ಯೆಯನ್ನೂ ನಾವು ನಿರ್ಲಕ್ಷಿಸಿಲ್ಲ. ಬರ ಸಮಸ್ಯೆ ಸೇರಿದಂತೆ ಎಲ್ಲ ವಿಚಾರಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ನಾವು ಯಾವುದೇ ವಿಚಾರವನ್ನು ಬೇರೆಡೆಗೆ ತಿರುಗಿಸುತ್ತಿಲ್ಲ. ನಮ್ಮ ಸರ್ಕಾರಕ್ಕೆ ಜನಬೆಂಬಲ ಸಿಗುತ್ತಿದೆ. ಅದನ್ನು ವಿರೋಧ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ” ಎಂದು ಅವರು ಪ್ರತಿಕ್ರಿಯಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img