ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಯುದ್ಧ ಪರಿಸ್ಥಿತಿ ಹಾಗೂ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಮಹತ್ವದ ಭೇಟಿ ನೀಡಿದ್ದು, ಭಾರತ ಮತ್ತು ಯುಎಇ ನಡುವೆ ರಕ್ಷಣಾ, ಅನಿಲ ಪೂರೈಕೆ ಹಾಗೂ ಕಾರ್ಯತಂತ್ರದ ತೈಲ ನಿಕ್ಷೇಪಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಯುಎಇ ಭಾರತೀಯ ಮೂಲಸೌಕರ್ಯ ಮತ್ತು ಹಣಕಾಸು ಸಂಸ್ಥೆಗಳಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದಗಳ ವಿನಿಮಯ ನಡೆಯಿತು.
ಭಾರತ-ಯುಎಇ ನಡುವಿನ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗಾಗಿ ಚೌಕಟ್ಟಿನ ಒಪ್ಪಂದವು ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ಭದ್ರತೆ ಮತ್ತು ಮಿಲಿಟರಿ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಇದೇ ವೇಳೆ, ಗುಜರಾತ್‌ನ ದ್ವಾರಕಾ ಜಿಲ್ಲೆಯ ವಡಿನಾರ್‌ನಲ್ಲಿ ಹಡಗು ದುರಸ್ತಿ ಕ್ಲಸ್ಟರ್ ಸ್ಥಾಪನೆಗೆ ಸಂಬಂಧಿಸಿದ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಈ ಒಪ್ಪಂದಗಳು ನವದೆಹಲಿ ಮತ್ತು ಅಬುಧಾಬಿ ನಡುವಿನ ಆರ್ಥಿಕ ಹಾಗೂ ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ನಿಯೋಗ ಮಟ್ಟದ ಮಾತುಕತೆ ವೇಳೆ ಪ್ರಧಾನಿ ಮೋದಿ, ಭಾರತವು ಪ್ರತಿಯೊಂದು ಸಂದರ್ಭದಲ್ಲೂ ಯುಎಇ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಪುನಃಸ್ಥಾಪನೆಗಾಗಿ ಭಾರತ ಸಾಧ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ ಯುಎಇ ಮೇಲೆ ಇರಾನ್ ನಡೆಸಿದ ದಾಳಿಯನ್ನು ಅವರು ಖಂಡಿಸಿದ್ದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರುವುದು ಜಾಗತಿಕ ಇಂಧನ ಭದ್ರತೆಗೆ ಅತ್ಯಂತ ಮುಖ್ಯ ಎಂದು ಒತ್ತಿಹೇಳಿದ್ದಾರೆ.
ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಿರುವುದಕ್ಕಾಗಿ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ದ್ವಿಪಕ್ಷೀಯ ಸಹಕಾರದ ಮಹತ್ವ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸಂವಾದ ಮತ್ತು ರಾಜತಾಂತ್ರಿಕತೆಯೇ ಉತ್ತಮ ಮಾರ್ಗ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.
ಯುಎಇ ಭಾರತಕ್ಕೆ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದ್ದು, ಕಳೆದ 25 ವರ್ಷಗಳಲ್ಲಿ ಏಳನೇ ಅತಿದೊಡ್ಡ ಹೂಡಿಕೆ ಮೂಲವಾಗಿದೆ. ಅಲ್ಲದೆ, 45 ಲಕ್ಷಕ್ಕೂ ಹೆಚ್ಚು ಭಾರತೀಯರು ಯುಎಇನಲ್ಲಿ ನೆಲೆಸಿದ್ದು, ಅವರ ಕಲ್ಯಾಣ ಕುರಿತೂ ಈ ಭೇಟಿಯಲ್ಲಿ ಚರ್ಚೆ ನಡೆಸಲಾಗಿದೆ.
ಪ್ರಸ್ತುತ ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆಯೂ ಯುಎಇ ಭಾರತದ ವಿಶ್ವಾಸಾರ್ಹ ಇಂಧನ ಪಾಲುದಾರವಾಗಿಯೇ ಉಳಿದಿದ್ದು, ದೀರ್ಘಾವಧಿಯ ಪೂರೈಕೆ ಒಪ್ಪಂದಗಳು ಭಾರತದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿವೆ.



