ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಉದ್ಯಮಿ ಅನನ್ಯಾ ಬಿರ್ಲಾ ಅವರು ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಹೊಸ ಸಂಚಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆಯ ಹಲವು ತಮಾಷೆಯ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದರಲ್ಲೂ ಬಜರ್ ಸುತ್ತಿನಲ್ಲಿ ಅನನ್ಯಾ ಪಾಂಡೆ ತಮ್ಮ ಮಾಜಿ ಗೆಳೆಯರೆಂದು ವದಂತಿಗಳಿದ್ದ ನಟರಿಗೆ ಕರೆ ಮಾಡಲು ಮುಂದಾಗಿದ್ದು ಪ್ರೇಕ್ಷಕರ ಗಮನ ಸೆಳೆದಿದೆ.
ಮಾಜಿ ಗೆಳೆಯರಿಗೆ ಕರೆ ಮಾಡಿದ ಅನನ್ಯಾ ಪಾಂಡೆ!
ಕಾರ್ಯಕ್ರಮದ ಬಜರ್ ಸುತ್ತಿನಲ್ಲಿ ಅನನ್ಯಾ ಪಾಂಡೆ ಫೋನ್ ಕೈಗೆತ್ತಿಕೊಂಡಾಗ ನಿರೂಪಕ ಕರಣ್ ಜೋಹರ್, ‘ನೀವು ಆದಿತ್ಯ ರಾಯ್ ಕಪೂರ್‌ಗೆ ಕರೆ ಮಾಡುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಆದರೆ ಅನನ್ಯಾ, ಆದಿತ್ಯಗೆ ಕರೆ ಮಾಡುವ ಬದಲು ನಟ ಇಶಾನ್ ಖಟ್ಟರ್‌ಗೆ ಫೋನ್ ಮಾಡುವುದಾಗಿ ಹೇಳಿದ್ದಾರೆ. ಬಳಿಕ ನಟ ಕಾರ್ತಿಕ್ ಆರ್ಯನ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ.
ಇದನ್ನು ಗಮನಿಸಿದ ಅನನ್ಯಾ ಬಿರ್ಲಾ, ‘ನೀನು ನಿನ್ನ ಎಲ್ಲಾ ಮಾಜಿ ಪ್ರೇಮಿಗಳಿಗೆ ಕರೆ ಮಾಡಿಬಿಟ್ಟೆ’ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅನನ್ಯಾ ಪಾಂಡೆ, ‘ಅಮ್ಮ ನನ್ನನ್ನು ಮನೆ ಒಳಗೆ ಸೇರಿಸುವುದಿಲ್ಲ’ ಎಂದು ನಗುತ್ತಾ ಹೇಳಿದ್ದಾರೆ. ಈ ಸಂಭಾಷಣೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ.
ಕಾರ್ತಿಕ್, ಇಶಾನ್, ಆದಿತ್ಯ ಜೊತೆ ಅನನ್ಯಾ ಹೆಸರು ಕೇಳಿಬಂದಿತ್ತು
ಅನನ್ಯಾ ಪಾಂಡೆ ಈ ಹಿಂದೆ ನಟರಾದ ಕಾರ್ತಿಕ್ ಆರ್ಯನ್, ಇಶಾನ್ ಖಟ್ಟರ್ ಮತ್ತು ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ‘ಪತಿ ಪತ್ನಿ ಔರ್ ವೋ’ ಚಿತ್ರದ ಸಮಯದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಹಾಗೂ ‘ಖಾಲಿ ಪೀಲಿ’ ಸಿನಿಮಾದ ಸಂದರ್ಭದಲ್ಲಿ ಇಶಾನ್ ಖಟ್ಟರ್ ಜೊತೆ ಅನನ್ಯಾ ಹೆಸರು ಕೇಳಿಬಂದಿತ್ತು.
ನಂತರ ಆದಿತ್ಯ ರಾಯ್ ಕಪೂರ್ ಜೊತೆ ಅನನ್ಯಾ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು 2024ರಲ್ಲಿ ದೂರವಾಗಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಆದರೆ, ಈ ಸಂಬಂಧಗಳ ಕುರಿತು ಅನನ್ಯಾ ಸಾರ್ವಜನಿಕವಾಗಿ ಎಲ್ಲ ವದಂತಿಗಳನ್ನೂ ದೃಢಪಡಿಸಿಲ್ಲ.
‘ನಮಗಿಬ್ಬರಿಗೂ ರಣವೀರ್ ಸಿಂಗ್ ಬೇಕು’ ಎಂದ ಶನಾಯಾ
ಈ ಸಂಚಿಕೆಯಲ್ಲಿ ನಟಿ ಶನಾಯಾ ಕಪೂರ್ ಕೂಡ ಭಾಗವಹಿಸಿದ್ದರು. ರಾಪಿಡ್ ಫೈರ್ ಸುತ್ತಿನಲ್ಲಿ ಕರಣ್ ಜೋಹರ್ ಅವರು ಶನಾಯಾ ಮತ್ತು ಅನನ್ಯಾ ಇಬ್ಬರಿಗೂ ಏನು ಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಶನಾಯಾ, ‘ನಮಗಿಬ್ಬರಿಗೂ ರಣವೀರ್ ಸಿಂಗ್ ಬೇಕು’ ಎಂದು ತಕ್ಷಣ ಉತ್ತರಿಸಿದ್ದಾರೆ.
ಶನಾಯಾ ಅವರ ಉತ್ತರ ಕೇಳಿ ಕರಣ್ ಜೋಹರ್ ಅಚ್ಚರಿಗೊಂಡರೆ, ಅನನ್ಯಾ ಪಾಂಡೆ ಕೂಡ ನಗುತ್ತಾ ಅವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ. ಈ ಕ್ಷಣವೂ ಕಾರ್ಯಕ್ರಮದಲ್ಲಿ ನಗೆ ಚಟಾಕಿ ಹಾರಿಸಿದೆ.
ಬಿರ್ಲಾ ಕುಟುಂಬಕ್ಕೆ ಹೋಲಿಕೆಯಾಗದ ಗುಣ ಯಾವುದು?
ಇನ್ನೊಂದು ಸುತ್ತಿನಲ್ಲಿ ಅನನ್ಯಾ ಬಿರ್ಲಾ ಅವರಿಗೆ, ಬಿರ್ಲಾ ಕುಟುಂಬದ ಇತರ ಸದಸ್ಯರಿಗೆ ಹೋಲಿಸಿದರೆ ತಮ್ಮಲ್ಲಿ ಯಾವ ಗುಣ ಭಿನ್ನವಾಗಿದೆ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ತಾವು ಎಂದಿಗೂ ಕೈಯಲ್ಲಿ ನಗದು ಹಣ ಇಟ್ಟುಕೊಳ್ಳುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಹೀಗೆ ಹಲವು ತಮಾಷೆಯ ಮಾತುಕತೆ, ವೈಯಕ್ತಿಕ ವಿಚಾರಗಳ ಚರ್ಚೆ ಮತ್ತು ಅಚ್ಚರಿಯ ಉತ್ತರಗಳಿಂದ ಕೂಡಿರುವ ಈ ಸಂಚಿಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮದ ಸಂಚಿಕೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.










