ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಆರಂಭಿಸಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜುಲೈ 31ರಂದು ಬಿಡುಗಡೆಯಾಗಲಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪ್ರೀಮಿಯರ್ ಶೋ ಟಿಕೆಟ್‌ಗಳನ್ನು ಹಾವೇರಿ ಸೇರಿದಂತೆ ರಾಜ್ಯದ ಸುಮಾರು 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗಿದೆ.
₹150 ಮೌಲ್ಯದ ಟಿಕೆಟ್‌ಗಳನ್ನು ಒಂದೊಂದು ಅಂಗಡಿಗೆ 50ರಿಂದ 150ರವರೆಗೆ ಹಂಚಿಕೆ ಮಾಡಲಾಗಿದ್ದು, ಪಡಿತರ ಪಡೆಯಲು ಬರುವ ಗ್ರಾಹಕರಿಗೆ ಟಿಕೆಟ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈ ಕ್ರಮದ ಬಗ್ಗೆ ಗೊಂದಲ ಮತ್ತು ಅಸಮಾಧಾನ ವ್ಯಕ್ತವಾಗಿದ್ದು, ಕೆಲವರು ಪಡಿತರದ ಮೇಲೆ ಪರಿಣಾಮ ಬೀಳಬಹುದೆಂಬ ಆತಂಕದಿಂದ ಟಿಕೆಟ್ ಖರೀದಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
ಬರಗಾಲ, ಬೆಳೆ ನಷ್ಟ ಹಾಗೂ ಬೆಲೆ ಏರಿಕೆಯ ನಡುವೆಯೇ ಪಡಿತರ ಅಂಗಡಿಗಳಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡುತ್ತಿರುವ ಕ್ರಮವನ್ನು ಹಲವರು ಪ್ರಶ್ನಿಸಿದ್ದು, ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಪ್ರಚಾರದ ವೇದಿಕೆಯಾಗಿ ಬಳಸಲಾಗುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಹಕರೊಂದಿಗೆ ವಿವಾದ ಉಂಟಾಗುವ ಭೀತಿಯಿಂದ ಟಿಕೆಟ್ ಮಾರಾಟಕ್ಕೆ ಹಿಂದೇಟು ಹಾಕುತ್ತಿರುವುದಾಗಿ ತಿಳಿದುಬಂದಿದೆ.
ಆದರೆ ಈ ಆರೋಪಗಳನ್ನು ಆಹಾರ ಇಲಾಖೆ ತಳ್ಳಿ ಹಾಕಿದೆ. ಉಪನಿರ್ದೇಶಕ ಮಂಜುನಾಥ ಡಿ.ಜೆ. ಮಾತನಾಡಿ, ಚಿತ್ರವು ನ್ಯಾಯಬೆಲೆ ಅಂಗಡಿಗಳು ಹಾಗೂ ಅನ್ನಭಾಗ್ಯ ಯೋಜನೆ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಯಾರ ಮೇಲೂ ಟಿಕೆಟ್ ಖರೀದಿಸಲು ಯಾವುದೇ ಒತ್ತಡ ಹೇರಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದ ಪೋಸ್ಟರ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಬಿಡುಗಡೆ ಮಾಡಿದ್ದು, ಇಲಾಖೆಯ ಆಯುಕ್ತರ ಸೂಚನೆಯಂತೆ ಪ್ರೀಮಿಯರ್ ಶೋ ಕುರಿತು ಮಾಹಿತಿ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಜುಲೈ 31ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ನವೀನ್ ಸಜ್ಜು, ಕೃಷ್ಣಪ್ಪ ಹಾಗೂ ರುದ್ರೇಗೌಡ ಅಭಿನಯಿಸಿದ್ದಾರೆ. ಜಯಶಂಕರ್ ಟಾಕೀಸ್ ನಿರ್ಮಾಣದ ಈ ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ನಿರ್ದೇಶನ, ಅನಂತ್ ಆರ್ಯನ್ ಸಂಗೀತ ನೀಡಿದ್ದು, ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್ ನಿರ್ಮಾಪಕರಾಗಿದ್ದಾರೆ.



