ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಸಂಚು ರೂಪಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ನಗರದ 67ನೇ ಸಿಸಿಹೆಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ಇಬ್ಬರಿಗೂ ತಲಾ ₹25 ಸಾವಿರ ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲರಾದರೆ ಒಂದು ವರ್ಷದ ಸಾದಾ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.
2017ರಲ್ಲಿ ನಡೆದಿದ್ದ ಸತೀಶ್ ಹತ್ಯೆ ಪ್ರಕರಣದಲ್ಲಿ ಪತ್ನಿ ಕಲ್ಪನಾ ಹಾಗೂ ಆಕೆಯ ಪ್ರಿಯಕರ ಜಾವೇದ್ ಪಾಷಾ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಅಂದಿನ ಇನ್ಸ್‌ಪೆಕ್ಟರ್ ವೈ. ಮುದ್ದುರಾಜ್ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಸಾಕ್ಷ್ಯಾಧಾರಗಳು, ತಾಂತ್ರಿಕ ಮಾಹಿತಿ ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆ ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎ. ಜಯಪ್ರಕಾಶ್ ಅವರು ಇಬ್ಬರಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದರು.
ಪ್ರಕರಣದ ಹಿನ್ನೆಲೆ
ಯಶವಂತಪುರದ ಕೆ.ಎನ್. ಬಡಾವಣೆಯಲ್ಲಿ ವಾಸಿಸುತ್ತಿದ್ದ ಸತೀಶ್ ಅವರಿಗೆ ತಿಳಿಯದಂತೆ ಪತ್ನಿ ಕಲ್ಪನಾ ಜಾವೇದ್ ಪಾಷಾ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. 2017ರ ಏಪ್ರಿಲ್ 18ರಂದು ಮನೆ ಬಿಟ್ಟು ಪ್ರಿಯಕರನೊಂದಿಗೆ ತೆರಳಿದ್ದ ಕಲ್ಪನಾ ನಾಪತ್ತೆಯಾಗಿರುವ ಬಗ್ಗೆ ಸತೀಶ್ ಪೊಲೀಸರಿಗೆ ದೂರು ನೀಡಿದ್ದರು.
ನಂತರ ತಮ್ಮ ಸಂಬಂಧಕ್ಕೆ ಪತಿಯೇ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಕಲ್ಪನಾ ಮತ್ತು ಜಾವೇದ್, ಸತೀಶ್ ಹತ್ಯೆಗೆ ಸಂಚು ರೂಪಿಸಿದ್ದರು. ಮೇ 22ರಂದು ಕಲ್ಪನಾ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿಗೆ ನೀಡಿದ್ದಳು. ಸತೀಶ್ ನಿದ್ರೆಗೆ ಜಾರಿದ ಬಳಿಕ ಮನೆಗೆ ಬಂದ ಜಾವೇದ್ ಜೊತೆ ಸೇರಿ, ಚೂಡಿದಾರ್ ಬಟ್ಟೆಯಿಂದ ಕುತ್ತಿಗೆ ಬಿಗಿದು, ಬಾಯಿಗೆ ಬಟ್ಟೆ ತುರುಕಿ, ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಬಳಿಕ ಸತೀಶ್ ವಿಷ ಸೇವಿಸಿ ಮೃತಪಟ್ಟಂತೆ ನಾಟಕವಾಡಿ ಪ್ರಕರಣವನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದರು. ತಮ್ಮ ಮೇಲೆ ಅನುಮಾನ ಬಾರದಂತೆ ಕೃತ್ಯಕ್ಕೆ ಬಳಸಿದ್ದ ಸಿಮ್ ಕಾರ್ಡ್ ಅನ್ನು ಮುರಿದು ನಾಶಪಡಿಸಿದ್ದರೂ, ತನಿಖೆಯಲ್ಲಿ ದೊರೆತ ಸಾಕ್ಷ್ಯಗಳು ಹಾಗೂ ವೈದ್ಯಕೀಯ ವರದಿ ಆರೋಪಿಗಳ ವಿರುದ್ಧ ಬಲವಾದ ಪುರಾವೆಯಾಗಿ ಪರಿಣಮಿಸಿತು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ.ವಿ. ಅಶ್ವಥನಾರಾಯಣ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.



