ಭಟ್ಕಳ: ಮುರಿನಕಟ್ಟೆ ಸ್ಥಳಾಂತರ ವಿವಾದವು ಭಟ್ಕಳದಲ್ಲಿ ಕಾನೂನು ಕ್ರಮಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ 18 ಮಂದಿಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಧಾರ್ಮಿಕ ಸ್ಥಳವಾಗಿದ್ದ ಮುರಿನಕಟ್ಟೆ ಸ್ಥಳಾಂತರ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪರಿಸ್ಥಿತಿ ತೀವ್ರವಾಗದಂತೆ 2021ರಿಂದಲೇ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಇತ್ತೀಚೆಗೆ 10×10 ಅಳತೆಯ ಹೊಸ ಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದ ಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದರು. ಇದರಿಂದ ಅಸಮಾಧಾನಗೊಂಡ ಗುಂಪೊಂದು ಮೇ 24ರಂದು ರಾತ್ರಿ ಭಟ್ಕಳ ನಗರ ಪೊಲೀಸ್ ಠಾಣೆ ಆವರಣದಲ್ಲಿ ಅಕ್ರಮವಾಗಿ ಸೇರಿ ಘೋಷಣೆಗಳನ್ನು ಕೂಗಿದೆ.
ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಆರೋಪದ ಮೇಲೆ ಪಿಎಸ್ಸೈ ತಿಮ್ಮಪ್ಪ ಎಸ್ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) 2023 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಶ ಕೃಷ್ಣಪ್ಪ ನಾಯ್ಕ, ಶ್ರೀನಿವಾಸ ಮಸ್ತಪ್ಪ ನಾಯ್ಕ ಸೇರಿದಂತೆ 18 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



